ಚಿಕ್ಕಬಳ್ಳಾಪುರ : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ, ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಅಲ್ಲದೆ ಹಿಂದೂ ಮುಸ್ಲಿಮರ ನಡುವೆ ಕೋಮುಗಲಭೆ ಪ್ರಕರಣಗಳು ಈ ಹಿಂದೆ ರಾಜ್ಯದಲ್ಲಿ ನಡೆದಿದೆ. ಆದರೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಪೋಷಕರ ವಿರೋಧ ನಡುವೆಯೂ ಹಿಂದೂ ಯುವಕನನ್ನು ಮುಸ್ಲಿಂ ಯುವತಿ ಒಬ್ಬಳು ವರಿಸಿರುವ ಘಟನೆ ವರದಿಯಾಗಿದೆ.
ಹೌದು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದ ಅನ್ಯ ಧರ್ಮದ ಯುವತಿಯನ್ನು ನಜ್ಮಾ ಎಂದು ತಿಳಿದುಬಂದಿದೆ. ಪೋಷಕರ ವಿರೋಧದ ನಡುವೆಯೂ ಹರೀಶ್ ಬಾಬು ಜೊತೆಗೆ ನಜ್ಮಾ ವಿವಾಹವಾಗಿದ್ದಾಳೆ. ಚಿಕ್ಕಬಳ್ಳಾಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೇಮಾಂಕರವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇಶ್ವರ ಗ್ರಾಮದ ನಜ್ಮಾ, ಚಿಕ್ಕಬಳ್ಳಾಪುರ ತಾಲೂಕಿನ ಯಾಪಲ ಹಳ್ಳಿಯ ಹರೀಶ್ ಬಾಬು ಜೊತೆಗೆ ಪ್ರೇಮ ವಿವಾಹವಾಗಿದ್ದಾಳೆ. ದೇಗುಲದಲ್ಲಿ ವಿವಾಹವಾಗಿ ಚಿಕ್ಕಬಳ್ಳಾಪುರದ ಎಸ್ಪಿ ಕಚೇರಿಗೆ ಇಬ್ಬರು ಬಂದಿದ್ದಾರೆ. ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ಹಿನ್ನೆಲೆ, ಎಸ್ ಪಿ ಭೇಟಿಯಾಗಿ ರಕ್ಷಣೆ ನೀಡುವಂತೆ ಹರೀಶ್ ಬಾಬು ಮತ್ತು ನಜ್ಮಾ ದಂಪತಿ ಮನವಿ ಮಾಡಿದ್ದಾರೆ.
ಈ ವೇಳೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ಎಸ್ಪಿ ಪ್ರಕರಣ ವರ್ಗಾಯಿಸಿದ್ದಾರೆ. ಹಿಂದೂ ಧರ್ಮದ ಯುವಕನ ಜೊತೆಗೆ ವಿವಾಹಕ್ಕೆ ನಜ್ಮಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪತಿಯ ಜೊತೆ ಹೋಗುವುದಾಗಿ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಜ್ಮಾ ಹೇಳಿಕೆ ದಾಖಲಿಸಿದ್ದಾಳೆ. ಠಾಣೆಯಲ್ಲಿ ಲಿಖಿತ ಹೇಳಿಕೆ ದಾಖಲಿಸಿ ಪತಿ ಹರೀಶ್ ಬಾಬು ಜೊತೆಗೆ ನಜ್ಮಾ ಇದೀಗ ತೆರಳಿದ್ದಾಳೆ. ದಂಪತಿಗೆ ತೊಂದರೆ ಕೊಡಬಾರದು ಎಂದು ಪೊಲೀಸರು ನಜ್ಮಾ ಪೋಷಕರಿಗೆ ಸೂಚನೆ ನೀಡಿ ಕಳುಹಿಸಿದ್ದಾರೆ.