ಬೆಂಗಳೂರು : ಇತ್ತೀಚಿಗೆ ವೇದಿಕೆಯೊಂದರಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೋಮು ದ್ವೇಷದ ಭಾಷಣ ಮಾಡಿದ್ದರು. ಬಳಿಕ ಅವರ ವಿರುದ್ಧ FIR ಕೂಡ ದಾಖಲಾಗಿತ್ತು. ಇದೀಗ ಈ ಕೇಸ್ ಆರೋಪ ಸಂಬಂಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಹರೀಶ್ ಪೂಂಜಾ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದ ಹಿನ್ನೆಲೆಯಲ್ಲಿ, ಅರ್ಜಿ ತಿದ್ದುಪಡಿ ಮಾಡುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಅವಕಾಶ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಆ ನಂತರ ಕಾನೂನು
ಪ್ರಕ್ರಿಯೆ ರದ್ದತಿ ಕೋರಿ ಪೂಂಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ರಜಾಕಾಲದ ನ್ಯಾಯಪೀಠ ಈ ಆದೇಶ ನೀಡಿದೆ.
ರಾಜ್ಯ ಸರ್ಕಾರದ ಪರ ವಕೀಲರು, ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಇಂದು ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ತನಿಖಾಧಿಕಾರಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ. ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಪೂಂಜಾ ಅವರು ಹೊಸ ಅರ್ಜಿ ಸಲ್ಲಿಸಬೇಕು, ಇಲ್ಲವೇ ಅದನ್ನು ತಿದ್ದುಪಡಿ ಮಾಡಬೇಕು. ಈಗಲೇ ಆರೋಪ ಪಟ್ಟಿ ಪ್ರತಿ ನೀಡಬೇಕು ಎಂದರೆ ಅದು ನನ್ನ ಬಳಿಯೂ ಇಲ್ಲ ಎಂದು ಪೀಠಕ್ಕೆ ವಿವರಿಸಿದರು.
ದೂರುದಾರ ಪರ ವಕೀಲರು, ಪ್ರಕರಣದಲ್ಲಿ ಇಬ್ರಾಹಿಂ ಪರವಾಗಿ ವಕಾಲತ್ತು ಹಾಕಿದ್ದೇನೆ. ಈ ಹಿಂದೆ ಪೂಂಜಾ ಅವರು ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸಾರ್ವಜನಿಕವಾಗಿ ಅವರು ಬಳಕೆ ಮಾಡಿರುವ ಭಾಷೆಯನ್ನು ನ್ಯಾಯಾಲಯ ನೋಡಬೇಕು. ಈ ಪ್ರಕರಣ ದಾಖಲಾದ ಬಳಿಕ ಪೂಂಜಾ ಅವರು, ಬಹಿರಂಗವಾಗಿ ಇನ್ನೂ ನೂರು ಪ್ರಕರಣವನ್ನು ಸರ್ಕಾರ ದಾಖಲಿಸಲಿ.
ಅದಕ್ಕೆ ಹೆದರುವ ಮಗ ನಾನಲ್ಲ ಎಂಬುದಾಗಿ ತಿಳಿಸಿದ್ದಾರೆ. ಇಂಥ ಕೋಮು ಭಾಷಣದಿಂದ ಕೊಲೆಗಳು ನಡೆಯುತ್ತಿವೆ. ಅವರು ವಿಷ ಉಗುಳುತಿದ್ದಾರೆ. ಹೀಗಾಗಿ, ರಜಾಕಾಲ ಮುಗಿದ ಬಳಿಕ ವಿಚಾರಣೆ ನಡೆಸಬಹುದು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಪೀಠಕ್ಕೆ ಮನವಿ ಮಾಡಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಮೇ 22ಕ್ಕೆ ಮುಂದೂಡಿತು.