ಬೆಂಗಳೂರು : ಇವತ್ತಿನಿಂದ ಸರ್ವೆ ಕಾರ್ಯ ಚುರುಕಾಗಿ ಆಗಲಿದೆ. ಯಾವುದೇ ಕಾರಣಕ್ಕೂ ಸಮೀಕ್ಷೆಯ ಅವಧಿ ವಿಸ್ತರಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಬಗ್ಗೆ ಕೃಷ್ಣಾದಲ್ಲಿಂದು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.
ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದ್ದು, ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳ ಕಾರಣ ಸಮೀಕ್ಷೆ ನಿಧಾನವಾಗಿತ್ತು. ಈಗ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇಂದಿನಿಂದ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಸಮೀಕ್ಷೆ ಕಾರ್ಯಕ್ಕೆ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಸಮೀಕ್ಷೆ ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕರಿಗೆ ಗೌರವಧನದ ಬಗ್ಗೆ ಯಾವುದೇ ಅನುಮಾನ ಬೇಡ. ಈಗಾಗಲೇ ಗೌರವಧನವನ್ನು ಬಿಡುಗಡೆ ಮಾಡಿದ್ದೇವೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದು ಕೇವಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮೀಕ್ಷೆಯಲ್ಲ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿಗದಿತ ಗುರಿಯ ಪ್ರಗತಿ ಬಗ್ಗೆ ಪ್ರತಿ ದಿನ ಪರಿಶೀಲನೆ ನಡೆಸಬೇಕು.
ಸಮೀಕ್ಷೆ ಸಂದರ್ಭದಲ್ಲಿ ಮನೆಗಳಿಗೆ ಬೀಗ ಹಾಕಿದ್ದರೆ, ಅಂತಹ ಮನೆಗಳಲ್ಲೂ ಗಣತಿ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು. ಪ್ರತಿ ದಿನ ಜಿಲ್ಲಾವಾರು ಕನಿಷ್ಠ ಶೇ.10ರಷ್ಟು ಸಮೀಕ್ಷೆ ಗುರಿಯನ್ನು ಸಾಧಿಸಬೇಕು. ಪ್ರಾದೇಶಿಕ ಆಯುಕ್ತರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಮೀಕ್ಷೆ ಪ್ರಗತಿಯ ಪರಿಶೀಲನೆ ನಡೆಸಬೇಕು ಮತ್ತು ಸಕ್ರಿಯವಾಗಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸೂಚನೆ ನೀಡಲಾಗಿದೆ.