ಬೆಂಗಳೂರು : ಎಡಿಜಿಪಿ ಚಂದ್ರಶೇಖರ್ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ದಾಖಲಿಸಿರುವ ಎಫ್ಐಆರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಎಚ್ ಡಿ ಕುಮಾರಸ್ವಾಮಿ ಅವರ ಜಾಮೀನು ರದ್ದು ಕೋರಿ ಲೋಕಾಯುಕ್ತ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ಇರುವ ‘FIR’ ಆಧರಿಸಿ ಜಾಮೀನು ರದ್ದು ಕೇಳುವಂತಿಲ್ಲ ಎಂದು ಆದೇಶ ನೀಡಿತು.
2014ರ ಸಾಯಿ ವೆಂಕಟೇಶ್ವರ ಮೀನರಲ್ಸ್ ಕೇಸ್ ಗೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಜಾಮೀನು ರದ್ದು ಕೋರಿ ಲೋಕಾಯುಕ್ತ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ರದ್ದುಗೊಳಿಸುವಂತೆ ಕೋರಿ ಮನವಿ ಮಾಡಲಾಗಿದ್ದು, ಲೋಕಾಯುಕ್ತ ಪೊಲೀಸರ ಅರ್ಜಿ ಪ್ರಶ್ನಿಸಿ ಎಚ್ ಡಿ ಕುಮಾರಸ್ವಾಮಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಎಡಿಜಿಪಿ ಚಂದ್ರಶೇಖರ್ ದಾಖಲಿಸಿರುವ ಎಫ್ಐಆರ್ ಗೆ ಹೈಕೋರ್ಟ್ ಈಗಾಗಲೇ ತಡೆ ನೀಡಿದೆ. ಇದೀಗ ಅದೇ ಕೇಸ್ ಗೆ ಸಂಬಂಧಿಸಿದಂತೆ ಜಾಮೀನು ರದ್ದುಗೊಳಿಸುವಂತೆ ಲೋಕಾಯುಕ್ತ ಪೊಲೀಸರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಲೋಕಾಯುಕ್ತ ಪೊಲೀಸರ ಅರ್ಜಿ ಕಾನೂನುಬಾಹಿರವೆಂದು ಎಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಕುಮಾರಸ್ವಾಮಿ ತನಿಖಾಧಿಕಾರಿಯನ್ನೇ ಬೆದರಿಸಲು ಯತ್ನಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರ ಪರವಾಗಿ ಎಸ್‍ಪಿಪಿ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದರು. ತಡೆಯಾಜ್ಞೆ ಇರುವ FIR ಆಧರಿಸಿ ಜಾಮೀನು ರದ್ದು ಕೇಳುವಂತಿಲ್ಲ. ಬೇರೆ ಕಾನೂನು ಬದ್ಧ ಕಾರಣಗಳಿದ್ದರೆ ಮಾತ್ರ ಮುಂದುವರೆಯಬಹುದು ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದಾ ಹೈಕೋರ್ಟ್ ಪೀಠ ಆದೇಶ ನೀಡಿದೆ.ಜಾಮೀನು ರದ್ದು ಕೋರಿದ ಪ್ರಕರಣದಲ್ಲಿ ಸದ್ಯಕ್ಕೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.