ಕಲಬುರ್ಗಿ : ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಒಟ್ಟು 8 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಗಳು ಇರುವುದು ಪತ್ತೆಯಾಗಿದೆ. ಈ ಹಿನ್ನಲೆ ಆಹಾರ ಇಲಾಖೆ, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದವರ ವಿರುದ್ಧ ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಮುಂದಾಗಿದೆ.
ಈ ವಿಚಾರವಾಗಿ ಕಲಬುರ್ಗಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಕರ್ನಾಟಕದಲ್ಲಿ ಅನರ್ಹರಿಗೆ ನೀಡಲಾಗಿದ್ದ ಬಿಪಿಎಲ್ ಪಡಿತರ ಕಾರ್ಡ್‌ಗಳ ಪೈಕಿ ಈಗಾಗಲೇ 3.65 ಲಕ್ಷ ಕಾರ್ಡ್ ಗಳನ್ನು ಪತ್ತೆ ಮಾಡಿ ರದ್ದುಪಡಿಸಲಾಗಿದ್ದು, ಇನ್ನೂ ಸಾಕಷ್ಟ ಅನರ್ಹರು ಬಿಪಿಎಲ್ ಕಾರ್ಡ್ ಗಳನ್ಜು ಹೊಂದಿದ್ದಾರೆ. ಅವುಗಳನ್ನು ಪತ್ತೆ ಮಾಡಿ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಡಕ್ ಸೂಚನೆ ನೀಡಿದ್ದಾರೆ.
ಅನರ್ಹರ ಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್ ಇದ್ದು, ಅನರ್ಹರನ್ನು ಬಿಪಿಎಲ್ ಕಾರ್ಡ್ ನ ಸೌಲಭ್ಯದಿಂದ ತೆಗೆದುಹಾಕುವಂತೆ ಹಾಗೂ ಅರ್ಹರಿಗೆ ಈ ಸೌಲಭ್ಯವನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದರು. ಇನ್ನು ರಾಜ್ಯದಲ್ಲಿ ಬೆಳೆಹಾನಿಯಾಗಿರುವುದಕ್ಕೆ ಪರಿಹಾರ ನೀಡಲು ಅನುಕೂಲವಾಗುವಂತೆ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದ್ದು, ವರದಿ ಬಂದ ನಂತರ ಬೆಳೆಪರಿಹಾರವನ್ನು ರೈತರಿಗೆ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.