ಕಲಬುರಗಿ : 10 ವರ್ಷಗಳ ಬಳಿಕ ಇಂದು ಕಲಬುರಗಿಯಲ್ಲಿ ಮಹತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದೆ. 2014ರಲ್ಲಿ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ನಡೆಸಿದ್ದರು. ಇಂದು ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಯಲಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಗುವುದು.
ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ದಶಕದ ನಂತರ ಸಚಿವ ಸಂಪುಟ ಸಭೆ ನಡೆಯಲಿದ್ದು, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸೇರಿ ಹಲವು ಮಹತ್ವದ ಘೋಷಣೆಗಳ ಪ್ರಕಟಿಸುವ ನಿರೀಕ್ಷೆ ಇದೆ.
ನಗರಾಭಿವೃದ್ದಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕ ಭಾಗದ ಜನರ ಬಹು ನಿರೀಕ್ಷೆಯಂತೆ ಸಿಎಂ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಕಲಬುರಗಿ ಯಲ್ಲಿ ಸೆಪ್ಟೆಂಬರ್ 17 ರಂದು ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ. ಈ ಭಾಗದ ಇಲಾಖಾವಾರು ಸಮಗ್ರ ಅಭಿವೃದ್ದಿಯ ಕುರಿತು ಚರ್ಚಿಸಿ ನೀಲಿ ನಕ್ಷೆ ತಯಾರಿಸುವ ಬಗ್ಗೆಯೂ ಕೂಡಾ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ನಮ್ಮ ಭಾಗದ ಎಲ್ಲ ಶಾಸಕರ ಬೇಡಿಕೆಯ ಪಟ್ಟಿ ನೋಡಿದರೆ ರಾಜ್ಯದ ಬಜೆಟ್ ಗಾತ್ರದಷ್ಟಾಗುತ್ತದೆ. ಆದರೆ ಮ್ಯಾಕ್ರೋ ಯೋಜನೆಯಡಿಯಲ್ಲಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕೊನೆ ಪಕ್ಷ ಈ ಸಲ ಯೋಜನೆಗಳ ಬಗ್ಗೆ ಚರ್ಚಿಸಿದರೆ ಮುಂದಿನ ವರ್ಷವಾದರೂ ಯೋಜನೆ ಬರುತ್ತವೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದ ಸಚಿವರು ತಮ್ಮ ಸರ್ಕಾರ ಬಂದ ಮೇಲೆ ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ನಮ್ಮ ಇಲಾಖೆಯಲ್ಲಿಯೇ 800 ಇಂಜಿನಿಯರ್ ಗಳ ಹುದ್ದೆ ಭರ್ತಿ ಮಾಡಲಾಗಿದೆ ಎಂದರು.
ಮುಂದಿನ ಎರಡು ವರ್ಷದಲ್ಲಿ ಕಲ್ಯಾಣ ಪಥ ಯೋಜನೆಯಡಿಯಲ್ಲಿ ನಮ್ಮ ಭಾಗದ ರಸ್ತೆಗಳ ರಿಪೇರಿ ಹಾಗೂ ಉನ್ನತಿಕರಣ ಮಾಡಲಾಗುವುದು ಎಂದು ಹೇಳಿದ ಖರ್ಗೆ, ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮ ಭಾಗದ ಅಭಿವೃದ್ದಿ ವಿಚಾರದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು. ರಾಜ್ಯದಲ್ಲಿ ಒಟ್ಟು 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಹಂತಹಂತವಾಗಿ ತುಂಬಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದರು.