ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಶುಚಿ ಯೋಜನೆಯನ್ನು ಮುಂದುವರಿಸುತ್ತಿದ್ದು, 71.83 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ವಿಶೇಷವಾಗಿ ರಾಜ್ಯಾದ್ಯಂತ ಆಶಾಕಿರಣ ಯೋಜನೆ ವಿಸ್ತರಣೆಯಾಗೆ 52.85 ಕೋಟಿ ವೆಚ್ಚದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಶಾಶ್ವತ ದೃಷ್ಟಿ ಕೇಂದ್ರಗಳನ್ನ ತೆರೆಯಲಾಗುವುದು.
ಸಾರ್ವಜನಿಕರ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮತ್ತು ಕೆಂಪುಕಲ್ಲು ಗಣಿಕಾರಿಕೆ ನೀತಿ ಸಡಿಲಗೊಳಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಶೀಘ್ರದಲ್ಲಿಯೇ ಪರಿಷ್ಕೃತ ನೀತಿ ಜಾರಿಗೆ ಬರಲಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಆರೋಗ್ಯ ಇಲಾಖೆಯ ಮಹತ್ವದ ವಿಷಯಗಳು..
* ಶುಚಿ ಯೋಜನೆಯಡಿ ರಾಜ್ಯದ ಶಾಲಾ ವಿದ್ಯಾರ್ಥಿನಿಯರಿಗೆ ವರ್ಷಕ್ಕಾಗುವಷ್ಟು 2.35 ಕೋಟಿ ನ್ಯಾಪ್ಕಿನ್ ಗಳನ್ನ 71.83 ಕೋಟಿ ವೆಚ್ಚದಲ್ಲಿ ಖರೀದಿಸಿ ವಿತರಿಸಲು ಅನುಮೋದನೆ.
* 52.85 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಆಶಾಕಿರಣ ಯೋಜನೆ ವಿಸ್ತರಣೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಾಶ್ವತ ದೃಷ್ಟಿ ಪರೀಕ್ಷಾ ಕೇಂದ್ರಗಳನ್ನ ತೆರೆದು, ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಉಚಿತ ಕನ್ನಡಕಗಳನ್ನ ವಿತರಣೆ.
* 817 ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ – ನಮ್ಮ ಕ್ಲಿನಿಕ್‌ಗಳಿಗೆ 78.43 ಕೋಟಿ ವೆಚ್ಚದಲ್ಲಿ ಅವಶ್ಯವಿರುವ ಔಷಧ ಖರೀದಿ ಮತ್ತು ಸರಬರಾಜು ಮಾಡಲು ಆಡಳಿತಾತ್ಮಕ ಅನುಮೋದನೆ.
* ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಕಾಮಗಾರಿಯನ್ನು 24.22 ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ.
* CTRAV ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿ ಫಲಾನುಭವಿಗೆ ರೂ.1.5 ಲಕ್ಷದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ (ಟಾಪ್-ಅಪ್) ರೂಪದಲ್ಲಿ ಪ್ರತಿ ಫಲಾನುಭವಿಗೆ ರೂ.1 ಲಕ್ಷ ನೆರವು ಒದಗಿಸಲು ಈಗಿರುವ ರಾಜ್ಯ ಅಪಘಾತ ಪೀಡಿತರ ಯೋಜನೆಗೆ ತಿದ್ದುಪಡಿಗೆ ಒಪ್ಪಿಗೆ.
* ಜಿಲ್ಲೆ, ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅನುಸರಣೀಯ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆ (ABDM – HMS) ತಂತ್ರಾಂಶದ ಹಂತವಾರು ಅನುಷ್ಠಾನಕ್ಕೆ ವಾರ್ಷಿಕ 20.60 ಕೋಟಿ ವೆಚ್ವದಲ್ಲಿ ಕೈಗೆತ್ತಿಕೊಳ್ಳಲು ತಾತ್ವಿಕ ಅನುಮೋದನೆ.