ಬೆಂಗಳೂರು : ವಿಕಾಸಸೌಧದ ಮುಂದೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಭವನ ನಿರ್ಮಾಣ ಮಾಡಲಾಗುತ್ತದೆ. ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಂಪುಟ ಸಭೆಯ ಬಳಿಕ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿಕೆ ನೀಡಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು 28 ಎಕರೆ 8 ಗುಂಟೆ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಡಾ. ಅಂಬೇಡ್ಕರ್ ಜೀವನ ಚರಿತ್ರೆ ಬಗ್ಗೆ ಸ್ಪೂರ್ತಿ ಸೌಧ ನಿರ್ಮಾಣ ಮಾಡಲಾಗುವುದು. ಈ ಹಿಂದೆಯೂ ಸ್ಪೂರ್ತಿ ಸೌಧ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿತ್ತು. ಪರಿಷ್ಕೃತ ಅಂದಾಜು ಮಾಡಿ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
1994 ರಲ್ಲಿ ಮೈಸೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಮೈಸೂರಿನಲ್ಲಿ ಡಾ. ಅಂಬೇಡ್ಕರ್ ಭವನದ ಕಟ್ಟಡ ಪೂರ್ಣ ಆಗಿರಲಿಲ್ಲ. 23 ಕೋಟಿ ರೂಪಾಯಿ ಪರಿಷ್ಕೃತ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಿದೆ. ನಮ್ಮ ಅವಧಿಯಲ್ಲಿ ಅಂಬೇಡ್ಕರ್ ಭವನ ಕಟ್ಟಡ ಪೂರ್ಣ ಮಾಡುತ್ತೇವೆ. ಹಿಂದಿನ ಸರ್ಕಾರ ಕಟ್ಟಡ ಕಾಮಗಾರಿಯನ್ನು ಪೂರ್ಣ ಮಾಡಲಿಲ್ಲ. ಈಗಿನ ಕಟ್ಟಡವನ್ನೇ ಪೂರ್ಣ ಮಾಡಲಾಗುವುದು ಎಂದು ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಹೇಳಿಕೆ ನೀಡಿದರು.