ಬೆಂಗಳೂರು : ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೇಜಸ್ವಿ ಸೂರ್ಯ ಅವರು ಭಾನುವಾರ ನಡೆದ ಅದ್ಧೂರಿ ಆರತಕ್ಷತೆಗೂ ಮುನ್ನ ವಿಶೇಷ ಮನವಿಯೊಂದನ್ನು ಮಾಡಿದ್ದರು. ಆರತಕ್ಷತೆಗೆ ಬರುವವರು ದಯವಿಟ್ಟು ಹೂವಿನ ಬೊಕ್ಕೆಗಳು ಹಾಗೂ ಡ್ರೈಫ್ರೂಟ್ಸ್‌ಗಳನ್ನು ತರಬೇಡಿ ಎಂದು ಸವಿನಯದಿಂದ ಮನವಿ ಮಾಡಿದ್ದರು.ಹೂವಿನ ಬೊಕ್ಕೆಗಳಿಗೆ ಸುಮ್ಮನೆ ದುಂದು ವೆಚ್ಚ ಮಾಡಬೇಡಿ. ಕೇವಲ ಒಂದು ನಿಮಿಷದಲ್ಲಿ ಆ ಹೂವನ್ನು ಸ್ವೀಕರಿಸಿ, ಪಕ್ಕಕ್ಕೆ ಇಡಲಾಗುತ್ತೆ. ಇದೆಲ್ಲ ಸುಮ್ಮನೆ ವೇಸ್ಟ್ ಎಂದು ಹೇಳಿಕೆ ನೀಡಿದ್ದರು.
ಆರತಕ್ಷತೆ ಕಾರ್ಯಕ್ರಮಕ್ಕೆ ಹೂವಿನ ಬೊಕ್ಕೆಗಳು, ಡ್ರೈಫ್ರೂಟ್ಸ್‌ಗಳನ್ನು ದಯವಿಟ್ಟು ತರಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಫೇಸ್ ಬುಕ್ ಹಾಗೂ ಯು ಟ್ಯೂಬ್ ಲೈವ್ ನಲ್ಲಿ ಕಾರಣವನ್ನೂ ಸಹ ಕೊಟ್ಟಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ತೇಜಸ್ವಿ ಸೂರ್ಯ ಅವರ ಇಂತಹ ಹೇಳಿಕೆಗಳು ಅನುಚಿತ ಮತ್ತು ತಮ್ಮ ಜೀವನಕ್ಕಾಗಿ ಪುಷ್ಪ ಕೃಷಿಯನ್ನು ಅವಲಂಬಿಸಿರುವ ಲಕ್ಷಾಂತರ ರೈತರ ಶ್ರಮವನ್ನು ದುರ್ಬಲಗೊಳಿಸುತ್ತವೆ ಎಂದು ದಕ್ಷಿಣ ಭಾರತ ಪುಷ್ಪ ಕೃಷಿ ಸಂಘದ ಅಧ್ಯಕ್ಷ ಟಿ.ಎಂ ಅರವಿಂದ್ ಹೇಳಿದ್ದಾರೆ.
ತೇಜಸ್ವಿ ಸೂರ್ಯ ಅವರು ತಮ್ಮ ಮದುವೆಯ ಅರತಕ್ಷತೆಗೆ ಫೇಸ್‌ಬುಕ್ ಲೈವ್ ಮೂಲಕ ಸಾರ್ವಜನಿಕರನ್ನು ಆಹ್ವಾನಿಸುವ ಸಂದರ್ಭದಲ್ಲಿ ಹೂಗುಚ್ಛಗಳು ನ್ಯಾಷನಲ್ ವೇಸ್ಟ್, ಅವುಗಳನ್ನು ನೀಡುವುದು ಬೇಡವೆಂದು ಮನವಿ ಮಾಡಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅರವಿಂದ್ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಹೂವುಗಳಿಗೆ ಹಿಂದೂ ಸಂಸ್ಕೃತಿಯಲ್ಲಿ ಬಹಳ ಮಹತ್ವದ ಸ್ಥಾನವಿದೆ. ದೇವರ ಪೂಜೆಗೆ ಹೂವುಗಳನ್ನು ಅರ್ಪಿಸು ವುದು ಹಾಗೂ ಶುಭ ಸಂದರ್ಭಗಳಲ್ಲಿ ನೈಸರ್ಗಿಕ ಹೂವುಗಳನ್ನು ನೀಡುವುದು ಶ್ರೇಷ್ಠ ಎಂಬ ನಂಬಿಕೆ ಇದೆ. ತಾವು ಉಡುಗೊರೆಯನ್ನು ಬೇಡ ಎಂದು ಹೇಳುವುದು ಸರಿ. ಆದರೆ, ಹೂಗೂಚ್ಛಗಳನ್ನು ‘ನ್ಯಾಷನಲ್ ವೇಸ್ಟ್’ ಎನ್ನುವ ಪದ ಪ್ರಯೋಗದಿಂದ ಲಕ್ಷಾಂತರ ರೈತರ ಶ್ರಮದ ಫಲಕ್ಕೆ ಧಕ್ಕೆಯಾಗುತ್ತದೆ ಎಂದು ತಿಳಿಸಿದ್ದಾರೆ.