ಮೈಸೂರು : ರಾಜ್ಯದಲ್ಲಿ ಗಣೇಶ ಗಲಾಟೆಗಳು ನಡೆಯುತ್ತಿರುವುದು ಬಿಜೆಪಿ ಕುಮ್ಮುಕ್ಕಿನಿಂದ. ಬಿಜೆಪಿಯವರು ಕೋಮುವಾದಿಗಳು ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಕುಮ್ಮುಕ್ಕಿನಿಂದ ಗಣೇಶ ಗಲಾಟೆಗಳು ನಡೆಯುತ್ತಿವೆ. ಬಿಜೆಪಿಯವರು ಕೋಮುವಾದಿಗಳು, ಬಿಜೆಪಿಯವರ ಹೇಳಿಕೆಗಳಿಂದ ಗಲಾಟೆಗಳು ನಡೆಯುತ್ತಿವೆ. ಘಟನೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ನಿನ್ನೆ ದಾವಣಗೆರೆ ನಗರದಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಮೆರವಣಿಗೆಯ ಮೇಲೆ ಕಲ್ಲುತೂರಾಟ ನಡೆಸಿದ್ದ 18 ಆರೋಪಿಗಳನ್ನು ಇಂದು ಪೊಲೀಸರು ಜಡ್ಜ್ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಬಳಿಕ ಜಡ್ಜ್ ಎಲ್ಲಾ 18 ಆರೋಪಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ದಾವಣಗೆರೆಯಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ಬಸವ ನಗರ ಠಾಣೆಯಲ್ಲಿ ಈ ಕುರಿತು ಎರಡು ಪ್ರಕರಣ ದಾಖಲಾಗಿತ್ತು. ಇದೀಗ ಬಂಧಿತ 18 ಆರೋಪಿಗಳನ್ನು ಜಡ್ಜ್ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಎಂಸಿಸಿಎ ಬ್ಲಾಕ್ ನಲ್ಲಿರುವ ಜಡ್ಜ್ ಪ್ರಶಾಂತ ನಿವಾಸದಲ್ಲಿ ಇದೀಗ ಆರೋಪಿಗಳನ್ನು ಪೊಲೀಸರು ಹಾಜರುಪಡಿಸಿದ್ದಾರೆ. ಸದ್ಯ 18 ಆರೋಪಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಜಡ್ಜ್ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.