ಹುಬ್ಬಳ್ಳಿ : ಎಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿ ಕುಟುಂಬ ಮುಕ್ತ ಆಗುವುದಿಲ್ಲವೋ, ಅಲ್ಲಿಯವರೆಗೆ ನಾನು ಬಿಜೆಪಿಗೆ ಮರು ಸೇರ್ಪಡೆ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ಮುಂದುವರೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪೂಜ್ಯರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಂಸ್ಕೃತಿ ನಮ್ಮದಲ್ಲ. ಪೂಜ್ಯರನ್ನು ಯಾರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ಮಠಮಾನ್ಯಗಳಿಗೆ ಹಣ ನೀಡಿದ್ದು ನಾವೇ ಎಂದು ಬಹಳ ಮಾತನಾಡುತ್ತಾರೆ ಎಲ್ಲಿಯವರೆಗೆ ಒಂದು ಕುಟುಂಬದಿಂದ ಬಿಜೆಪಿ ಮುಕ್ತ ಆಗುವುದಿಲ್ಲವೋ, ಅಲ್ಲಿಯವರೆಗೆ ನಾನು ಬಿಜೆಪಿಗೆ ಮರು ಸೇರ್ಪಡೆ ಆಗಲ್ಲ ಎಂದರು.
ಆ ಕುಟುಂಬ ಉತ್ತರ ಕರ್ನಾಟಕದವರ ಜೊತೆ ಹೇಗೆ ನಡೆದುಕೊಂಡಿದ್ದಾರೆ. ನೀರಾವರಿ ವಿಚಾರದಲ್ಲಿ ಬಹಳ ದೊಡ್ಡ ದ್ರೋಹವಾಗಿದೆ. ಭಾರತೀಯ ಜನತಾ ಪಕ್ಷದಲ್ಲಿ ಎಷ್ಟೋ ಜನ ಮುಖ್ಯಮಂತ್ರಿ ಆಗಿದ್ದಾರೋ ಅವರೆಲ್ಲರೂ ಉತ್ತರ ಕರ್ನಾಟಕದವರ ಆಶೀರ್ವಾದದಿಂದ ಆಗಿದ್ದು. ಬೆಂಗಳೂರಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುತ್ತಾರೆ ಅಂತೆ. ಅದರ ಬದಲು ಧಾರವಾಡ ಮತ್ತು ಬೆಳಗಾವಿಯಲ್ಲಿ ವಿಮಾನ ನಿಲ್ದಾಣ ಮಾಡಲಿ ಎಂದರು.