ಬೆಂಗಳೂರು : ರಾಜ್ಯದಲ್ಲಿ ನಿನ್ನೆಯಿಂದ ಹಾಲು ಸೇರಿ ವಿವಿಧ ಅಗತ್ಯ ವಸ್ತು, ಸೇವೆಗಳ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಇಂದಿನಿಂದ ಅಹೋರಾತ್ರಿ ಧರಣಿ ನಡೆಸಲಿದೆ. ಈ ಮೂಲಕ ಏ.13ರವರೆಗೆ ವಿವಿಧ ಹಂತಗಳಲ್ಲಿ ಈ ಕುರಿತು ನಡೆಸುವ ಹೋರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಈ ಧರಣಿ ಆರಂಭವಾಗಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಮತ್ತಿತರರು
ಪಾಲ್ಗೊಳ್ಳಲಿದ್ದಾರೆ.
ಧರಣಿಯಲ್ಲಿ ಪಾಲ್ಗೊಳ್ಳುತ್ತೇನೆ : BSY
ರಾಜ್ಯ ಸರ್ಕಾರ ಜನವಿರೋಧಿ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಬಿಜೆಪಿ ಬುಧವಾರ ಅಹೋರಾತ್ರಿ ಧರಣಿ ನಡೆಸಲಿದ್ದು, ನಾನೂ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ತಿಂಗಳು ಒಂದಲ್ಲ ಒಂದು ರೀತಿ ಬೆಲೆ ಹೆಚ್ಚಿಸುತ್ತಿದ್ದಾರೆ. ಪೆಟ್ರೋಲ್, ಬಸ್ ಪ್ರಯಾಣ ದರ ಹೆಚ್ಚಿಸಿದ್ದಾರೆ. ಸಾಮಾನ್ಯ ಜನ ಬಳಸುವ ಹಾಲಿನ ದರವನ್ನು ಇನ್ನೆಂದೂ ಇಲ್ಲದ ರೀತಿಯಲ್ಲಿ ಒಂದೇ ಬಾರಿಗೆ ಒಂದು ಲೀಟರ್‌ಗೆ 4 ರು. ಹೆಚ್ಚಿಸಿದ್ದಾರೆ. ಒಟ್ಟಾರೆ ಒಂದೇ ವರ್ಷದಲ್ಲಿ ಹಾಲಿಗೆ ಒಂದು ಲೀಟರ್‌ಗೆ 9 ರು. ಹೆಚ್ಚಿಸಿದ್ದಾರೆ.
ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಿಸಿದ್ದಾರೆ. ಇದರಿಂದ ಸಣ್ಣ, ಮಧ್ಯಮ ವರ್ಗದ ಜನ ಜೀವನ ಮಾಡಲು ಸಾಧ್ಯವಿಲ್ಲದೆ ಉಸಿರುಗಟ್ಟುವ ಸ್ಥಿತಿ ಬಂದಿದೆ. ನೋವು ಅನುಭವಿಸುತ್ತಿರುವ ಎಲ್ಲರೂ ಪಕ್ಷಭೇದ ಮರೆತು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಹಾಗೂ ಹೋರಾಟ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು.
ಮಾಧ್ಯಮ ಸ್ನೇಹಿತರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ ಎಂದು ಭಾವಿಸುತ್ತೇನೆ. ಇಂಥ ಸಂದರ್ಭದಲ್ಲಿ ಮಾಧ್ಯಮ ಸ್ನೇಹಿತರು ನಮ್ಮ ಹೋರಾಟದಲ್ಲಿ ಗಟ್ಟಿಯಾಗಿ ನಿಂತಾಗ ಈ ಸರಕಾರ ಒಂದು ಹೆಜ್ಜೆ ಹಿಂದಿಡಬಹುದು ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ಯತ್ನಾಳ್ ಅವರ ಉಚ್ಚಾಟನೆ ವಿಚಾರವಾಗಿ ಯಾವುದೇ ಮಾತನಾಡುವುದಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.
ಅಜೀರ್ಣ ಆಗುವಷ್ಟು ಬಹುಮತವನ್ನು ಜನರು ಕಾಂಗ್ರೆಸ್ ಸರಕಾರಕ್ಕೆ ಕೊಟ್ಟಾಗ ಒಂದು ರೀತಿ ತುಘಲಕ್ ದರ್ಬಾರ್ ನಡೆಸಿ, ಜನಹಿತವನ್ನು ಮರೆತು, ಸಾಮಾನ್ಯ ಜನರು ಬದುಕಲಾಗದಷ್ಟು, ಉಸಿರು ಕಟ್ಟುವ ಪರಿಸ್ಥಿತಿಯನ್ನು ತಂದದ್ದು ಸಿದ್ದರಾಮಯ್ಯ ಸರಕಾರದ ಸಾಧನೆ ಎಂದು ಅವರು ಟೀಕಿಸಿದರು.