ಬೆಳಗಾವಿ : ಇಂದು ವಿಧಾನಸಭೆಯಲ್ಲಿ ಸಚಿವರ ವಿರುದ್ಧ ಹನಿಟ್ರ್ಯಾಪ್ ವಿಷಯ ಗಂಭೀರವಾಗಿ ಚರ್ಚೆಯಾಯಿತು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ನೇರವಾಗಿ ಹೇಳಿಕೆ ನೀಡಿದರು. ಬಳಿಕ ಕೆ.ಎನ್ ರಾಜಣ್ಣ ಇದಕ್ಕೆ ಪ್ರತಿಕ್ರಿಯೆ ನೀಡಿದರು. ಅಲ್ಲದೆ ಆರ್ ಆರ್ ಕ್ಷೇತ್ರದ ಶಾಸಕ ಮುನಿರತ್ನ ಅವರು ಕೂಡ ಆಕ್ರೋಶ ಹೊರಹಾಕಿದರು. ಇದೀಗ ಸಚಿವ ಸತೀಶ್ ಜಾರಕಿಹೊಳಿ ಮತ್ತೊಂದು ಹೇಳಿಕೆ ನೀಡಿದ್ದು, ಬಿಜೆಪಿಯಲ್ಲಿ ಪ್ರಭಾವಿ ಸಚಿವರನ್ನು ಸಿಡಿ ಮೂಲಕ ಬೆದರಿಕೆ ಹಾಕಿದ್ದರು ಎಂದಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ವರಿಷ್ಠರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಕಾಂಗ್ರೆಸ್ ಹೈಕಮಾಂಡ್ ಗಮನಸೆಳೆಯುವ ಪ್ರಯತ್ನ ಮಾಡುತ್ತೇವೆ. ರಮೇಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ಮೂಲಕ ಪ್ರಕರಣ ಹೊರ ಬಂದಿದೆ. ಈ ಎಪಿಸೋಡ್ ಇಲ್ಲಿಗೆ ಕೊನೆಯಾಗಬೇಕು. ಬಿಜೆಪಿಯಲ್ಲಿ ಪ್ರಭಾವಿ ಸಚಿವರನ್ನು ಸಿಡಿ ಮೂಲಕ ಬೆದರಿಕೆ ಹಾಕಿದ್ದರು. ಸಿಡಿ ಮೂಲಕ ಸರ್ಕಾರದಲ್ಲಿ ಲಾಭ ಪಡೆಯುವ ಪ್ರಯತ್ನ ಆಗಿದೆ. ತನಿಖೆ ಮಾಡಿ ಪ್ರಭಾವಿ ನಾಯಕರು ಹೊರ ಬರಬೇಕು. ಈ ಪ್ರಕರಣದ ಹಿಂದೆ ಯಾರು ಇದ್ದಾರೋ ಅವರು ಹೊರಗೆ ಬರಲೇಬೇಕು ಎಂದು ಬೆಳಗಾವಿಯಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.
ಸಚಿವ ಕೆ.ಎನ್ ರಾಜಣ್ಣ ಆದಷ್ಟು ಬೇಗ ದೂರು ಕೊಡಬೇಕು. ರಾಜಣ್ಣ ದೂರು ಕೊಟ್ಟು ತನಿಖೆಯಾಗಿ ಇದಕ್ಕೆ ಇತಿಶ್ರೀ ಹಾಡಬೇಕು. ಇದೊಂದು ಕ್ಯಾನ್ಸರ್ ಪಿಡುಗು ಇದ್ದಂತೆ. ಕೆಲ ಪ್ರಕರಣಗಳು ಹೊರಗೆ ಬಂದಿವೆ. ಆದರೆ ಇನ್ನೂ ಕೆಲವು ಹೊರಗಡೆ ಬಂದಿಲ್ಲ. ಸಿಡಿ ಹೊರ ಬರದೇ ಬ್ಲಾಕ್ ಮೇಲ್ ಮಾಡುವ ಕೆಲಸವು ಆಗಿದೆ. ಸಿಡಿ ಮಾಡಿಸುವ ಉದ್ದೇಶವೇನು ಎಂದು ಆರೋಪಿಗಳು ಹೇಳಬೇಕು. ತನಿಖೆಗೆ ನಾವು ಕೂಡ ಒತ್ತಾಯ ಮಾಡುತ್ತಿದ್ದೇವೆ. ಈ ಹಿಂದೆ ಬೆಳಗಾವಿಯಲ್ಲಿ ಆಗಿದೆ ರಾಜಕಾರಣಿಗಳ ವಿರುದ್ಧ ರಾಜಕಾರಣಿಗಳು ಷಡ್ಯಂತ್ರ ಮಾಡಿದ್ದಾರೆ. ಯಾರ ವಿರುದ್ಧವು ಆರೋಪ ಮಾಡಲ್ಲ. ಪೊಲೀಸರಿಂದ ತನಿಖೆ ಮಾಡಿಸಿದರೆ ಸತ್ಯ ಹೊರಗಡೆ ಬರುತ್ತದೆ ಎಂದು ತಿಳಿಸಿದರು.