ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025 26 ನೇ ಸಾಲಿನ ದಾಖಲೆಯ 16ನೇ ರಾಜ್ಯ ಬಜೆಟ್ ಮಂಡನೆ ಮಾಡಿದರು. ಈ ಒಂದು ಬಜೆಟ್ ಕುರಿತು ಬಿಜೆಪಿಯವರು ಇದೊಂದು ಹಲಾಲ್ ಬಜೆಟ್ ಎಂದು ಟೀಕಿಸಿದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರ ಮನಸ್ಸಿನ ಕೊಳಕು ಭಾವನೆ ಹೊರ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಂದು ಧರ್ಮವನ್ನು, ಜಾತಿಯನ್ನು ನೋಡಲು ಆಗಲ್ಲ. ಜಾತ್ಯಾತೀತವಾದಕ್ಕೆ ಅವರು ವಿರೋಧಿಗಳಾಗಿದ್ದಾರೆ. ಸಂವಿಧಾನ ವಿಚಾರಕ್ಕೆ ಅವರು ವಿರೋಧಿಗಳಾಗಿದ್ದಾರೆ. ಬಿಜೆಪಿಯವರು ಸಂಕುಚಿತ ಮನೋಭಾವನೆ ಇರುವವರು. ನಾವು ಧರ್ಮದ ಆಧಾರದಲ್ಲಿ ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿಲ್ಲ. ಅವರಿಗೆ ಮುಸ್ಲಿಂರನ್ನು ವಿರೋಧಿಸುವುದೇ ರಾಜಕೀಯ ನಿಲುವು ಆಗಿದೆ. ಸರ್ವರಿಗೆ ಸಮಪಾಲು ಎಲ್ಲರಿಗೂ ಸಿಕ್ಕಿಲ್ಲ. ಆ ದಿಕ್ಕಿನಲ್ಲಿ ನಾವು ನಡೆಯುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳು ಎಸ್ ಸಿಎಸ್ಪಿ ಟಿಎಸ್ಪಿ ಕಾಯ್ದೆ ಮಾಡಿರುವುದು ತೋರಿಸಲಿ. ಕೇಂದ್ರಕ್ಕೆ ಕೇಳುವ ಧೈರ್ಯ ಬಿಜೆಪಿಯವರಿಗೆ ಇಲ್ಲ. ಅವರಿಗೆ ಯಾವ ನೈತಿಕ ಹಕ್ಕು ಇದೆ? ಎಂದು ಪ್ರಶ್ನಿಸಿದರು. ನಾವು ಸಮಾನತೆಯಲ್ಲಿ ನಂಬಿಕೆ ಇಟ್ಟವರು. ಪಾಕಿಸ್ತಾನ ಬಜೆಟ್ ಅನ್ನುವುದು ಅವರು ಜಾತ್ಯಾತೀತ ವಿರೋಧಿಗಳು ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.