ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಜುಲೈ.12ರಂದು ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆಗೆ ನಿರ್ಧಾರ ಮಾಡಿದೆ.
ಹೌದು ಈ ಒಂದು ವಿಚಾರವಾಗಿ ಇಂದು ಮೈಸೂರಿನಲ್ಲಿ ಬಿಜೆಪಿಯ ಶಾಸಕ ಅಶ್ವಥ್ ನಾರಾಯಣ ನೇತೃತ್ವದಲ್ಲಿ ಬಿಜೆಪಿಯ ಮುಖಂಡರ ಸಭೆ ನಡೆಯಿತು. ಈ ಒಂದು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ, ನಗರಾಭಿವೃದ್ಧಿ ಪ್ರಾಧಿಕಾರದ ಅನುಕೂಲ ಪಡೆದು ಸಿದ್ದರಾಮಯ್ಯ ಸೈಟ್ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಆರೋಪಿಸಿದ್ದಾರೆ.
ಸಿಎಂ ಆಗಿ, ವಿಪಕ್ಷ ನಾಯಕನಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿನ್ನಲೆ ಶುಕ್ರವಾರ(ಜು.12) ಮೈಸೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಸಿಎಂ ರಾಜೀನಾಮೆಗೆ ಹಾಗೂ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ಮುಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದರು.
ಇನ್ನು ಅವರು ಈ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ಹಾಕಿಕೊಳ್ಳಲು ರೆಡಿಯಾಗಿದ್ದಾರೆ. ಕೆಂಪಣ್ಣ ಆಯೋಗ ಏನು ಆಯ್ತು? , ರೀಡೂ ಹಗರಣದಲ್ಲಿ ಏನಾಯ್ತು ಎಂದು ನಿಮಗೆ ಗೊತ್ತಲ್ಲವೇ?. ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಲ್ಲಿದ್ದೀರಾ?. ನಿಮ್ಮ ಅಧಿಕಾರಿಗಳು, ಸಚಿವರು ಭ್ರಷ್ಟಾಚಾರದಲ್ಲೇ ತೊಡಗಿದ್ದಾರೆ. ಜೊತೆಗೆ ಹೆಲಿಕಾಪ್ಟರ್ನಲ್ಲೇ ಹೋಗಿ ಫೈಲ್ ತಂದಿದ್ದಾರೆ. ನಿಮ್ಮ ಭಂಡತನ, ಹಗಲು ದರೋಡೆ ಕಂಡು ಬಂದಿದೆ ಎಂದು ವಾಗ್ದಾಳಿ ನಡೆಸಿದರು.