ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಕುಂದು-ಕೊರತೆಗಳಿಗೆ ತಕ್ಷಣ ಸ್ಪಂದಿಸಲು ಹಾಗೂ ಕಚೇರಿಗಳಲ್ಲಿ ಅಧಿಕಾರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಆಯುಕ್ತಾಲಯವು ಹೊಸದೊಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಮತ್ತು ಕಾರ್ಯದರ್ಶಿಗಳು ಸಾರ್ವಜನಿಕರ ಭೇಟಿಗೆ ಸಿಗುತ್ತಿಲ್ಲ, ಕ್ಷೇತ್ರ ಕಾರ್ಯದ ನೆಪದಲ್ಲಿ ಕಚೇರಿಯಿಂದ ಹೊರಗುಳಿಯುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಶಿಫಾರಸಿನ ಮೇರೆಗೆ ಹೊರಡಿಸಲಾದ ಈ ಆದೇಶದ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:
ಸಾರ್ವಜನಿಕರ ಭೇಟಿಗೆ ನಿಗದಿತ ಸಮಯ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಸಾರ್ವಜನಿಕರ ಭೇಟಿಗಾಗಿ ಪ್ರತಿದಿನ ಕಡ್ಡಾಯವಾಗಿ ಸಮಯವನ್ನು ನಿಗದಿಪಡಿಸಬೇಕು. ಆ ನಿಗದಿತ ಅವಧಿಯಲ್ಲಿ ಕಚೇರಿಯಲ್ಲೇ ಇದ್ದು ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಿ, ಸಮಸ್ಯೆಗಳಿಗೆ ಸ್ಪಂದಿಸಬೇಕು.
ಪ್ರವಾಸದ ವಿವರ ಪ್ರಕಟಣೆ ಕಡ್ಡಾಯ: ಪ್ರತಿ ವಾರ ಸೋಮವಾರದಿಂದ ಶನಿವಾರದವರೆಗೆ ಅಧಿಕಾರಿಗಳು ಕೈಗೊಳ್ಳುವ ಕ್ಷೇತ್ರ ಭೇಟಿ, ತರಬೇತಿ ಹಾಗೂ ತಾಲ್ಲೂಕು/ಜಿಲ್ಲಾ ಪಂಚಾಯಿತಿ ಸಭೆಗಳ ದಿನಚರಿ ಸೇರಿದಂತೆ ಅವರ ದೈನಂದಿನ ಪ್ರವಾಸ ಕಾರ್ಯಕ್ರಮದ ವಿವರಗಳನ್ನು ಕಡ್ಡಾಯವಾಗಿ ಗ್ರಾಮ ಪಂಚಾಯಿತಿ ಕಚೇರಿಯ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಬೇಕು.
ಪಂಚತಂತ್ರ 2.0 ಮೂಲಕ ಕಡ್ಡಾಯ ಬಯೋಮೆಟ್ರಿಕ್ ಹಾಜರಾತಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO), ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಪ್ರತಿದಿನ ಪಂಚತಂತ್ರ 2.0 ತಂತ್ರಾಂಶದಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿಯನ್ನು ದಾಖಲಿಸಬೇಕು.
ಸಿಬ್ಬಂದಿಗಳಿಗೂ ಬಯೋಮೆಟ್ರಿಕ್ ಕಡ್ಡಾಯ: ಕರವಸೂಲಿಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ಗಳು, ಸ್ವಚ್ಛತಾಗಾರರು, ನೀರುಗಂಟಿಗಳು ಮತ್ತು ಗ್ರಂಥಪಾಲಕರು ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿಗಳೂ ಪ್ರತಿದಿನ ಪಂಚತಂತ್ರ 2.0 ಮೂಲಕ ಬಯೋಮೆಟ್ರಿಕ್ ಹಾಜರಾತಿ ದಾಖಲಿಸುವುದನ್ನು ಪಿಡಿಒಗಳು ಖಚಿತಪಡಿಸಿಕೊಳ್ಳಬೇಕು.
ಹಾಜರಾತಿ ಆಧಾರದ ಮೇಲಷ್ಟೇ ವೇತನ ಬಿಡುಗಡೆ: ಗ್ರಾಮ ಪಂಚಾಯಿತಿಯ ಎಲ್ಲಾ ಸರ್ಕಾರಿ ನೌಕರರು ಹಾಗೂ ಸಿಬ್ಬಂದಿಗಳ ಪ್ರತಿ ತಿಂಗಳ ವೇತನವನ್ನು ಬಯೋಮೆಟ್ರಿಕ್ ಹಾಜರಾತಿಯ ಆಧಾರದ ಮೇಲಷ್ಟೇ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (EO) ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಹಾಗೂ ಕಾರ್ಯದರ್ಶಿಗಳು ಸಾರ್ವಜನಿಕರಿಗೆ ಸರಿಯಾಗಿ ಸಿಗುತ್ತಿಲ್ಲ, ಕೆಲಸದ ಮೇಲೆ ಹೋಗಿರುವುದಾಗಿ ಹೇಳಿದರೂ ಚಲನವಲನ ಪುಸ್ತಕದಲ್ಲಿ (Movement Register) ಯಾವುದೇ ದಾಖಲೆ ಇರುವುದಿಲ್ಲ ಎಂದು ಕಲ್ಯಾಣ ಸಮಿತಿಯು ತನ್ನ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪಾರದರ್ಶಕತೆ ತರಲು ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸರ್ಕಾರದ ಪಂಚಾಯತ್ ರಾಜ್ ಆಯುಕ್ತಾಲಯದ ಅಭಿವೃದ್ಧಿ ನಿರ್ದೇಶಕರು ಕಡಕ್ ಸೂಚನೆ ನೀಡಿದ್ದಾರೆ.








