ವಿಜಯಪುರ : ಕಳೆದ ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದಲ್ಲಿ ಆಲಮಟ್ಟಿ ಎಡದಂಡೆ ಕಾಲುವೆಗೆ ತಾಯಿಯೊಬ್ಬಳು ತನ್ನ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮಕ್ಕಳನ್ನು ಕಾಲುವೆಗೆ ತಳ್ಳಿದ್ದು ತಾಯಿ ಅಲ್ಲ ತಂದೆ ಎಂದು ಸ್ಪೋಟಕ ವಿಚಾರ ಬಯಲಾಗಿದೆ.
ಹೌದು ಈ ಒಂದು ಘಟನೆಯಲ್ಲಿ ತಾಯಿ ಭಾಗ್ಯ ಬದುಕುಳಿದಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಚೇತರಿಸಿಕೊಂಡ ಭಾಗ್ಯ ತನ್ನ ಗಂಡನ ಕರಾಳ ಮುಖವನ್ನು ತೆರೆದಿಟ್ಟಿದ್ದು. ಭಾಗ್ಯಳ ಗಂಡ ನಿಂಗರಾಜ್ ಹಾಗು ಆತನ ಅಣ್ಣತಮ್ಮಂದಿರ ನಡುವೆ ಅಸ್ತಿಯ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಪತಿ ನಿಂಗರಾಜ್ ತನ್ನ ಮಕ್ಕಳನ್ನು ಕಾಲುವೆಗೆ ತಳ್ಳಿ ಬಳಿಕ ನನ್ನನ್ನು ಕೂಡ ಕಾಲವೆಗೆ ತಳ್ಳಿದ್ದ ಎಂದು ನಿಂಗರಾಜ್ ಭಜಂತ್ರಿಯ ಪತ್ನಿ ಭಾಗ್ಯ ಇದೀಗ ಪತಿಯ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾಳೆ.
ಮೃತ ಮಕ್ಕಳು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ಲಿಂಗರಾಜ ಭಜಂತ್ರಿ (5), ರಕ್ಷಾ ಲಿಂಗಗರಾಜ ಭಜಂತ್ರಿ (3), ಹಸನ್ ಲಿಂಗರಾಜ ಭಜಂತ್ರಿ ಹಾಗೂ 13 ತಿಂಗಳಿನ ಹುಸೇನ್ ಲಿಂಗರಾಜ ಭಜಂತ್ರಿ ಮೃತ ಮಕ್ಕಳು. ನಾಲ್ವರು ಮಕ್ಕಳ ತಾಯಿ ಭಾಗ್ಯ ಭಜಂತ್ರಿಯನ್ನ ಸ್ಥಳೀಯರು ಕಾಪಾಡಿದ್ದಾರೆ. ಕೌಟುಂಬಿಕ ಕಾರಣವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಮಹಿಳೆ ಹೇಳಿದ್ದೇನು?
ಮನೆಯಲ್ಲಿ ಸಾಯೋಣ ಅಂತ ಮೂರು ದಿನದ ಹಿಂದೆ ನನ್ನ ಪತಿ ಲಿಂಗರಾಜು ವಿಷ ತಂದು ಇಟ್ಟಿದ್ದ. ಮಕ್ಕಳಿಗೆ ವಿಷ ಕುಡಿಸಿದ್ದ. ಮನೆಯಲ್ಲಿ ಸಂಪೂರ್ಣ ವಿಷ ತೆಗೆದುಕೊಂಡರೆ ಎಲ್ಲರಿಗೂ ಗೊತ್ತಾಗುತ್ತದೆ ಅಂತಾ ಹೊರಗಡೆ ಕರೆದುಕೊಂಡು ಬಂದ. ನಂತರ ಕಾಲುವೆ ಹತ್ತಿರ ಬಂದು ಮೊದಲು ಎರಡು ಮಕ್ಕಳನ್ನು ತಳ್ಳಿದ.
ತದನಂತರ ಎರಡು ಮಕ್ಕಳು ಮತ್ತು ನನ್ನನ್ನು ಕಾಲುವೆಗೆ ದೂಡಿದ. ನನ್ನ ಗಂಡನನ್ನು ತುಂಬಾ ನಂಬಿದ್ದೆ. ದೇವರಿಗಿಂತ ಹೆಚ್ಚು ನಂಬಿದ್ದೆ. ಆದರೆ, ಅವನು ನನಗೆ ಮೋಸ ಮಾಡಿಬಿಟ್ಟ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ. ಆಸ್ತಿಯಲ್ಲಿ ಬಿಡಿಗಾಸು ಕೊಡಲ್ಲ ಅಂತಾ ಲಿಂಗರಾಜ್‌ಗೆ ಅಣ್ಣತಮ್ಮಂದಿರು ಹೇಳಿದ್ದರು. ಅದೆ ರೀತಿ ಇಂದು ಕೂಡ ಪರಸ್ಪರ ಗಲಾಟೆ ನಡೆದಿತ್ತು.
ಗಲಾಟೆಯ ನಂತರ ಮನೆಯಿಂದ ತೆಲಗಿಗೆ ಹೊರಟಾಗ ಕಾಲುವೆ ಹತ್ತಿರ ನಿಂಗರಾಜನ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿ ಆಗಿದೆ. ಆಗ ಪೆಟ್ರೋಲ್ ತರಲೆಂದು ನಿಂಗರಾಜ ಸ್ವಲ್ಪ ದೂರ ಹೋಗುತ್ತಿದ್ದಂತೆ ಭಾಗ್ಯ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ ಎಂದು ಪತಿ ಲಿಂಗರಾಜು ಕಣ್ಣೀರು ಹಾಕಿ ನಾಟಕವಾಡಿದ್ದ. ಇದೀಗ ಪತ್ನಿ ಭಾಗ್ಯ ತನ್ನ ಗಂಡನ ಕರಾಳ ಮುಖವನ್ನು ತೆರೆದಿಟ್ಟಿದ್ದಾಳೆ.