ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಶೀಘ್ರವೇ ನಂದಿನಿ ಹಾಲಿನ ದರ ಏರಿಕೆಗೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ್ದು, ಬೆಲೆ ಏರಿಕೆಯ ಅಂತಿಮ ನಿರ್ಧಾರ ಸಿಎಂ ಅಂಗಳದಲ್ಲಿದೆ.ಪ್ರತಿ ಲೀಟರ್ ಹಾಲಿಗೆ 5 ರೂ ಏರಿಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈಗಾಗಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ದರ ಹೆಚ್ಚಳ, ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯ ಬರೆ ಕಾಯುತ್ತಿರುವ ಸಂದರ್ಭದಲ್ಲೇ ಹಾಲಿನ ದರ ಏರಿಕೆ ವಿಚಾರ ಗಮನಸೆಳೆದಿದೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಹಾಲಿನ ದರ ಲೀಟರ್‌ಗೆ 5 ರೂಪಾಯಿ ಏರಿಸುವುದಕ್ಕೆ ಸಿದ್ಧತೆ ನಡೆಸಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಜೂನ್ 2024ರಲ್ಲಿ ಪ್ರತಿ ಪ್ಯಾಕೇಟ್‌ಗೆ 50 ಮಿಲಿ ಲೀ. ಹಾಲು ಹೆಚ್ಚುವರಿಯಾಗಿ ಕೊಟ್ಟು ಮತ್ತೆ 2 ರು.ಏರಿಕೆ ಮಾಡಲಾಗಿತ್ತು. ಇದೀಗ ರಾಜ್ಯದ 16 ಹಾಲು ಒಕ್ಕೂಟಗಳಿಂದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರು.ನಂತೆ ಏರಿಕೆ ಮಾಡಲು ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಹಾಲು ದರ ಏರಿಕೆಗೆ ಅನುಮತಿ ನೀಡುವಂತೆ ಕೆಎಂಎಫ್ ರಾಜ್ಯಸರ್ಕಾರಕ್ಕೆ ಕಳೆದ ವರ್ಷವೇ ಪ್ರಸ್ತಾವನೆ ಸಲ್ಲಿಸಿದೆ.
ಈ ಪ್ರಸ್ತಾವನೆ ಕುರಿತು ಕಳೆದ ತಿಂಗಳು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸಭೆ ನಡೆಸಿದ್ದಾರೆ. ರೈತರು ಜಾನುವಾರುಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹಾಲಿನ ದರ ಲೀಟರ್‌ಗೆ 5 ರು.ಏರಿಕೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದು, ಸರ್ಕಾರ ಎಷ್ಟು ದರ ಏರಿಕೆಗೆ ಒಪ್ಪಿಗೆ ನೀಡುತ್ತದೆ ಎಂಬುದರ ಮೇಲೆ ತೀರ್ಮಾನ ಕೈಗೊಳ್ಳಲು ನಿರೀಕ್ಷಿಸಲಾಗುತ್ತಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.