ಬೆಂಗಳೂರು : ಸತತ 17 ವರ್ಷಗಳ ಬಳಿಕ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಬಳಿಕ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತಗೊಂಡು 11 ಜನರು ಸಾವನ್ನಪ್ಪಿದ್ದು, ದುಃಖದ ಸಂಗತಿಯಾಗಿದ್ದು, ಅದರ ಬೆನ್ನಲ್ಲೇ ಇದೀಗ ಆರ್‌ಸಿಬಿ ಅಭಿವಾನಿಗಳಿಗೆ ಮತ್ತೊಂದು ಶಾಕ್ ಎದುರಾಗಿದೆ.
ಹೌದು. ಮುಂಬರುವ 2026ರ ಐಪಿಎಲ್ (IPL 2026) ಆವೃತ್ತಿಯಲ್ಲಿ RCB ತಂಡದ ಯಾವುದೇ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎನ್ನಲಾಗುತ್ತಿದೆ. ಆರ್‌ಸಿಬಿಯ ತವರು ಮೈದಾನ ಕರ್ನಾಟಕದಿಂದಲೇ ಎತ್ತಂಗಡಿ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಅಷ್ಟೆ ಅಲ್ಲದೇ ಕಾಲ್ತುಳಿತ ದುರಂತ ಪ್ರಕರಣ ಈಗ ಆರ್‌ಸಿಬಿ ತವರು ನೆಲವನ್ನ ತೊರೆಯುವಂತೆ ಮಾಡಿದೆ.
ವರದಿಗಳ ಪ್ರಕಾರ, ಆರ್‌ಸಿಬಿ ತನ್ನ ಎಲ್ಲಾ ತವರು ಪಂದ್ಯಗಳನ್ನ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಕ್ರೀಡಾಂಗಣದಲ್ಲಿ ಆಡುವ ಸಾಧ್ಯತೆಯಿದೆ. ಈ ಕುರಿತು MCA ಕಾರ್ಯದರ್ಶಿ ಕಮಲೇಶ್ ಪೈ ಮಾತನಾಡಿ, ಪುಣೆಯಲ್ಲಿ RCB ಪಂದ್ಯಗಳನ್ನ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಬೆಂಗಳೂರಿನಲ್ಲಿ ನಡೆದ ದುರಂತದ ಕಾರಣದಿಂದಾಗಿ ಅಲ್ಲಿ ಪಂದ್ಯಗಳನ್ನು ಆಯೋಜಿಸಲು ಸಮಸ್ಯೆ ಎದುರಾಗಿದೆ. ಆದ್ದರಿಂದ ಅವರು ಬೇರೆ ಕ್ರೀಡಾಂಗಣ ಹುಡುಕುತ್ತಿದ್ದಾರೆ. ನಮ್ಮ ಕ್ರೀಡಾಂಗಣವನ್ನು ಒದಗಿಸಲು ನಾವು ಮುಂದೆ ಬಂದಿದ್ದೇವೆ ಎಂದು ತಿಳಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ಕರ್ನಾಟಕ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಸಮಿತಿ ಹೇಳಿತ್ತು. ಅಷ್ಟೇ ಅಲ್ಲದೇ ಬೆಂಗಳೂರು ಪೊಲೀಸರು ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ಆಡಿಸಲು 17 ಷರತ್ತುಗಳನ್ನು ಸಹ ವಿಧಿಸಿದ್ದರು. ಒಂದು ವೇಳೆ ಬೆಂಗಳೂರಿನಲ್ಲಿ ಆಡಿಸಿ ಮತ್ತೆ ಸಮಸ್ಯೆಯಾದರೆ ಮತ್ತೊಂದು ಕಪ್ಪು ಚುಕ್ಕೆ ಬರದೇ ಇರಲು ತನ್ನ ಎಲ್ಲಾ ಪಂದ್ಯಗಳನ್ನು ಪುಣೆಯಲ್ಲಿ ಆಡಲು ಆರ್‌ಸಿಬಿ ಆಡಳಿತ ಮಂಡಳಿ ಮುಂದಾಗಿದೆ ಎನ್ನಲಾಗುತ್ತಿದೆ.








