ನವದೆಹಲಿ : ಹೊಸ ಕಾರು ಖರೀದಿಸುವವರಿಗೆ ದೇಶದ ಅತಿ ದೊಡ್ಡ ಕಾರ್ ಉತ್ಪಾದಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಶಾಕ್ ನೀಡಿದ್ದು, ಕಂಪನಿಯು ವಿವಿಧ ಮಾದರಿಗಳ ಕಾರುಗಳ ಬೆಲೆಯನ್ನು 2500 ರೂ. ನಿಂದ 62,000 ರೂ.ಗಳಷ್ಟು ಏರಿಕೆ ಮಾಡಿದೆ.
ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಬರೋಬ್ಬರಿ 62 ಸಾವಿರ ರೂ.ವರೆಗೆ ಏರಿಕೆ ಮಾಡಲಾಗಿದ್ದು, ಏಪ್ರಿಲ್ 8ರಿಂದ ಹೊಸ ದರ ಜಾರಿಗೆ ಬರಲಿದೆ. ಕಾಂಪ್ಯಾಕ್ಟ್ ಎಸ್.ಯು.ವಿ. ಫ್ರಾಂಕ್ಸ್ ಬೆಲೆಯನ್ನು 2500 ರೂ. ಹೆಚ್ಚಳ ಮಾಡಲಾಗಿದೆ, ಡಿಸೈರ್ ಟೂರ್ ಎಸ್ 3000 ರೂ.ನಷ್ಟು ಏರಿಕೆ ಮಾಡಲಾಗಿದೆ. ಎಕ್ಸೆಲ್ 6, ಎರ್ಟಿಗಾ ಬೆಲೆಯನ್ನು 12500 ರೂ. ಹೆಚ್ಚಳ ಮಾಡಲಾಗಿದೆ.
ಫೆಬ್ರವರಿ 1ರಿಂದ 32,500 ರೂ. ವರೆಗೆ ದರ ಹೆಚ್ಚಳ ಮಾಡಲಾಗಿದ್ದು, ಇದೀಗ ಎರಡು ತಿಂಗಳಲ್ಲಿ ಮತ್ತೆ ಮಾರುತಿ ಸುಜುಕಿ ದರ ಪರಿಷ್ಕರಣೆ ಮಾಡಲಾಗಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸುವ ಉದ್ದೇಶದಿಂದ ಈ ಕ್ರಮ ಅನಿವಾರ್ಯ ಎಂದು ಮಾರುತಿ ಸುಜುಕಿ ಕಂಪನಿ ತಿಳಿಸಿದೆ.