ಮುಂಬೈ : ಮುಸ್ಲಿಂರಿಗೆ ಇದೀಗ ಮಹಾರಾಷ್ಟ್ರ ಸರಕಾರ ಬಿಗ್ ಶಾಕ್ ನೀಡಿದೆ. ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ SEBCಯಡಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇಕಡಾ 5 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ಬಗ್ಗೆ ವರದಿಯಾಗಿದೆ.
ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರ ಈ ಹೊಸ ಆದೇಶವನ್ನು ನೀಡಿದೆ. ಈ ಆದೇಶದಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ(SEBC) ವರ್ಗದ ಅಡಿಯಲ್ಲಿ ಮುಸ್ಲಿಂ ಸಮುದಾಯದ ಕೆಲವು ವರ್ಗಗಳಿಗೆ ಈ ಹಿಂದೆ ದೊರೆಯುತ್ತಿದ್ದ ಮೀಸಲಾತಿ ರದ್ದುಗೊಂಡಿದೆ.
2014ರಲ್ಲಿ ಕಾಂಗ್ರೆಸ್-ಎನ್ ಸಿಪಿ ಮೈತ್ರಿ ಸರಕಾರ ಈ ಮೀಸಲಾತಿಯನ್ನು ಘೋಷಿಸಿತ್ತು. ಈ ನಿರ್ಧಾರವನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ನಂತರ ಬಾಂಬೆ ಹೈಕೋರ್ಟ್ ಸರಕಾರಿ ಉದ್ಯೋಗಗಳಲ್ಲಿ ಈ ಮೀಸಲಾತಿಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತು.
ಶಿಕ್ಷಣ ಸಂಸ್ಥೆ ಹಾಗೂ ಸರಕಾರಿ ಉದ್ಯೋಗ ಪಡೆಯಲು ಮುಸ್ಲಿಂ ಸಮುದಾಯಕ್ಕೆ ಇದು ಅನುಕೂಲವಾಗಲಿದೆ ಎಂದು ಹೇಳಲಾಗಿತ್ತು. ಇದೀಗ ಹಿಂದಿನ ಸರಕಾರದ ಆದೇಶವನ್ನು ಬಿಜೆಪಿ ಸರಕಾರ ರದ್ದುಪಡಿಸಿದೆ.








