ನವದೆಹಲಿ : ಹೊಸ ಹಣಕಾಸು ವರ್ಷ 2026-27ರ ಆರಂಭದೊಂದಿಗೆ (ಏಪ್ರಿಲ್ 1), ಎಟಿಎಂನಿಂದ ಹಣ ಹಿಂಪಡೆಯುವ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳಾಗುತ್ತಿವೆ. ಯುಪಿಐ (UPI) ಮೂಲಕ ಹಣ ತೆಗೆಯುವುದು, ಉಚಿತ ವಹಿವಾಟಿನ ಮಿತಿ ಮತ್ತು ದೈನಂದಿನ ಹಣ ಹಿಂಪಡೆಯುವ ಮಿತಿಯ ಮೇಲೆ ಈ ಬದಲಾವಣೆಗಳು ನೇರ ಪರಿಣಾಮ ಬೀರಲಿವೆ.
ಬ್ಯಾಂಕ್ ಜಾರಿಗೆ ತರುತ್ತಿರುವ ಪ್ರಮುಖ ಬದಲಾವಣೆಗಳು ಇಲ್ಲಿವೆ:
1. ಉಚಿತ ಮಿತಿಯೊಳಗೆ ಯುಪಿಐ ನಗದು ಹಿಂಪಡೆಯುವಿಕೆ
ಈ ಹಿಂದೆ ಎಟಿಎಂ ಕಾರ್ಡ್ ಇಲ್ಲದೆ ಯುಪಿಐ ಮೂಲಕ ಹಣ ಹಿಂಪಡೆಯುವುದು ಪ್ರತ್ಯೇಕ ಸೌಲಭ್ಯವೆಂದು ಪರಿಗಣಿಸಲಾಗುತ್ತಿತ್ತು. ಆದರೆ HDFC ಬ್ಯಾಂಕ್ ಈಗ ಸ್ಪಷ್ಟಪಡಿಸಿರುವಂತೆ, ಯುಪಿಐ ಮೂಲಕ ಎಟಿಎಂನಿಂದ ಹಣ ತೆಗೆಯುವುದನ್ನು ಸಹ ಮಾಸಿಕ ‘ಉಚಿತ ವಹಿವಾಟು ಮಿತಿ’ಯಲ್ಲೇ ಸೇರಿಸಲಾಗುತ್ತದೆ. ಇದರಿಂದ ನಿಮ್ಮ ಉಚಿತ ವಹಿವಾಟಿನ ಮಿತಿ ಬೇಗನೆ ಮುಗಿಯುವ ಸಾಧ್ಯತೆಯಿದೆ.
2. ಮಿತಿ ಮೀರಿದರೆ ₹23 ಶುಲ್ಕ
ನಿಮ್ಮ ಬ್ಯಾಂಕ್ ನಿಗದಿಪಡಿಸಿದ ಉಚಿತ ವಹಿವಾಟಿನ ಮಿತಿ ಮುಗಿದ ನಂತರ, ಪ್ರತಿ ಹೆಚ್ಚುವರಿ ಹಣ ಹಿಂಪಡೆಯುವಿಕೆಗೆ 23 ರೂಪಾಯಿ (ಜೊತೆಗೆ ತೆರಿಗೆ) ಪಾವತಿಸಬೇಕಾಗುತ್ತದೆ. ಪದೇ ಪದೇ ಸಣ್ಣ ಮೊತ್ತದ ಹಣವನ್ನು ಎಟಿಎಂನಿಂದ ಪಡೆಯುವವರಿಗೆ ಇದು ಹೊರೆಯಾಗಲಿದೆ.
3. PNB ದೈನಂದಿನ ನಗದು ಮಿತಿ ಕಡಿತ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಡೆಬಿಟ್ ಕಾರ್ಡ್ಗಳ ದೈನಂದಿನ ಹಣ ಹಿಂಪಡೆಯುವ ಮಿತಿಯನ್ನು ಅರ್ಧದಷ್ಟು ಕಡಿಮೆ ಮಾಡಿದೆ:
ಸಾಮಾನ್ಯ ಕಾರ್ಡ್: ₹1 ಲಕ್ಷದಿಂದ ₹50,000 ಕ್ಕೆ ಇಳಿಕೆ.
ಪ್ರೀಮಿಯಂ ಕಾರ್ಡ್: ₹1.5 ಲಕ್ಷದಿಂದ ₹75,000 ಕ್ಕೆ ಇಳಿಕೆ.
4. ಬಂಧನ್ ಬ್ಯಾಂಕ್ (Bandhan Bank) ಹೊಸ ನಿಯಮಗಳು
ಬಂಧನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಮಿತಿಗಳನ್ನು ನಿಗದಿಪಡಿಸಿದೆ:
ಸ್ವಂತ ಬ್ಯಾಂಕ್ ಎಟಿಎಂ: ತಿಂಗಳಿಗೆ 5 ಆರ್ಥಿಕ ವಹಿವಾಟುಗಳು ಉಚಿತ.
ಇತರ ಬ್ಯಾಂಕ್ ಎಟಿಎಂ: ಮೆಟ್ರೋ ನಗರಗಳಲ್ಲಿ 3 ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ 5 ವಹಿವಾಟು ಉಚಿತ.
ಮಿತಿ ಮೀರಿದ ನಂತರ ಪ್ರತಿ ಹಣಕಾಸು ವಹಿವಾಟಿಗೆ ₹23 ಮತ್ತು ಹಣಕಾಸೇತರ ವಹಿವಾಟಿಗೆ (ಬ್ಯಾಲೆನ್ಸ್ ಚೆಕ್ ಇತ್ಯಾದಿ) ₹10 ಶುಲ್ಕ ವಿಧಿಸಲಾಗುತ್ತದೆ.
5. ಬ್ಯಾಲೆನ್ಸ್ ಇಲ್ಲದೆ ಟ್ರಾನ್ಸಾಕ್ಷನ್ ಫೇಲ್ ಆದರೆ ದಂಡ!
ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಎಟಿಎಂ ವಹಿವಾಟು ವಿಫಲವಾದರೆ (Transaction Failure), ಗ್ರಾಹಕರು ಇನ್ನು ಮುಂದೆ ₹25 ವರೆಗೆ ದಂಡ ಪಾವತಿಸಬೇಕಾಗುತ್ತದೆ.








