ನವದೆಹಲಿ : ವಿಮಾನ ಪ್ರಯಾಣಿಕರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಈಗಾಗಲೇ ದುಬಾರಿ ಎನಿಸಿರುವ ಅಂತರಾಷ್ಟ್ರೀಯ ವಿಮಾನ ಪ್ರಯಾಣದ ದರಗಳು ಈಗ ಮತ್ತಷ್ಟು ಏರಿಕೆಯಾಗಿದ್ದು, ವಿಮಾನಗಳು ಬಳಸುವ ಇಂಧನದ ಶೇ. 5ರಷ್ಟು ಏರಿಕೆ ಹಿನ್ನೆಲೆಯಲ್ಲಿ ಭಾರತದಲ್ಲಿ ಅಂತರಾಷ್ಟ್ರೀಯ ವಿಮಾನಯಾನ ದರದಲ್ಲಿ ಇದೀಗ ಮತ್ತೆ ಹೆಚ್ಚಳ ಆಗಿದೆ.
ಇಂಧನ ದರ ಏರಿಕೆಯೇ ಪ್ರಮುಖ ಕಾರಣ ವಿಮಾನಗಳು ಬಳಸುವ ಇಂಧನ ಅಂದರೆ ಎಟಿಎಫ್ (Aviation Turbine Fuel) ಬೆಲೆಯಲ್ಲಿ ಶೇ. 5ರಷ್ಟು ಏರಿಕೆಯಾಗಿರುವುದೇ ಈ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಏರಿಳಿತಗಳು ನೇರವಾಗಿ ವಿಮಾನಯಾನ ಸಂಸ್ಥೆಗಳ ಕಾರ್ಯಚರಣೆಯ ವೆಚ್ಚದ ಮೇಲೆ ಪರಿಣಾಮ ಬೀರಿದ್ದು, ಅನಿವಾರ್ಯವಾಗಿ ಆ ಹೊರೆಯನ್ನು ಪ್ರಯಾಣಿಕರ ಮೇಲೆ ವರ್ಗಾಯಿಸಲಾಗುತ್ತಿದೆ.
ಯಾವ ದೇಶಗಳಿಗೆ ದರ ಏರಿಕೆ? ಭಾರತದಿಂದ ಅಮೆರಿಕ, ಯುರೋಪ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಟಿಕೆಟ್ ದರಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಪ್ರಮುಖವಾಗಿ ಲಂಡನ್, ದುಬೈ, ಸಿಂಗಾಪುರ ಮತ್ತು ಅಮೆರಿಕದ ಪ್ರಮುಖ ನಗರಗಳಿಗೆ ಸಂಚರಿಸುವ ಪ್ರಯಾಣಿಕರು ಈಗ ಮೊದಲಿಗಿಂತ ಹೆಚ್ಚಿನ ದರ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಯಾಣಿಕರ ಆತಂಕ ಸಾಮಾನ್ಯವಾಗಿ ರಜಾ ದಿನಗಳಲ್ಲಿ ಅಥವಾ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಪದೇ ಪದೇ ಆಗುತ್ತಿರುವ ಈ ದರ ಏರಿಕೆಯಿಂದಾಗಿ ಮಧ್ಯಮ ವರ್ಗದ ಪ್ರಯಾಣಿಕರು ಕಂಗಾಲಾಗಿದ್ದಾರೆ. ವಿಮಾನಯಾನ ಸಂಸ್ಥೆಗಳು ತಮ್ಮ ಲಾಭದ ಪ್ರಮಾಣವನ್ನು ಉಳಿಸಿಕೊಳ್ಳಲು ಇಂಧನ ಸರ್‌ಚಾರ್ಜ್‌ಗಳನ್ನು ಹೆಚ್ಚಿಸುತ್ತಿರುವುದು ಪ್ರವಾಸೋದ್ಯಮದ ಮೇಲೂ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.








