ಬೆಳಗಾವಿ : ಇತ್ತೀಚಿಗೆ ಸೈಬರ್ ವಂಚಕರಿಂದ ಅನೇಕರು ಮೋಸ ಹೋಗಿ ಬೀದಿಗೆ ಬಂದಿದ್ದು ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಸಹ ನಡೆದಿವೆ. ಇದೀಗ ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿಗಳು ಸೈಬರ್ ವಂಚಕರಿಂದ 50 ಲಕ್ಷ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಗುಜರಾತ ರಾಜ್ಯದ ಸೂರತ್‌ನ ನಿವಾಸಿ ಚಿರಾಗ್ ಜೀವರಾಜಬಾಯ್ ಲಕ್ಕಡ್ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ವಿರುದ್ಧ ಅಪರಾಧ ಸಂಖ್ಯೆ 32/2025 ಕಲಂ 66(ಡಿ) ಐಟಿ ಕಾಯ್ದೆ ಮತ್ತು ಕಲಂ 108, 308(2), 319(2), 03(5) ಬಿಎನ್ಎಸ್ ಅಡಿ ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ಹಿನ್ನೆಲೆ?
ಬೀಡಿ ಗ್ರಾಮದ ಕ್ರಿಶ್ಚಿಯನ್ ಓಣಿಯ ನಿವಾಸಿಗಳಾಗಿದ್ದ ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83) ಮತ್ತು ಅವರ ಪತ್ನಿ ಪ್ಲೇವಿಯಾ ನಜರತ್ (78) ಅವರು ಮಾರ್ಚ್ 27ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ಲೇವಿಯಾ ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟಿದ್ದರೆ, ಡಿಯಾಗೋ ಚಾಕುವಿನಿಂದ ತಮ್ಮ ಕುತ್ತಿಗೆಗೆ ಚುಚ್ಚಿಕೊಂಡು, ಮನೆಯ ಹಿಂದಿನ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ನಿಮ್ಮ ಫೋಟೋ ಐಡಿ ಬಳಸಿ ಬೇರೆಯವರು ಸೈಬರ್ ವಂಚನೆ ಮಾಡಿದ್ದಾರೆ ಎಂದು ಡಿಯಾಗೋ ನಜರತ್ ಅವರಿಗೆ ಕರೆ ಬಂದಿತ್ತು. ಇದಾದ ಬಳಿಕ ಮತ್ತೊಬ್ಬ ವ್ಯಕ್ತಿಗೆ ಕರೆ ವರ್ಗಾವಣೆ ಮಾಡಿದ್ದರು. ಸೈಬರ್ ವಂಚನೆ ಸರಿಪಡಿಸಲು ಈ ವೇಳೆ ಸೈಬರ್ ವಂಚಕರು ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಹೀಗಾಗಿ, ಸೈಬರ್ ವಂಚಕರಿಗೆ ಹಲವು ಸಲ ದಂಪತಿ ಸುಮಾರು 50 ಲಕ್ಷ ರೂ. ಹಣ ಹಾಕಿದ್ದಾರೆ. ಇದಾದ ಬಳಿಕ ಡಿಯಾಗೋ ಅವರು ಆ ವಂಚಕರಿಗೆ ಕರೆ ಮಾಡಿದ್ದಾರೆ. ಆದರೆ, ಅವರು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಹಾಕಿದ್ದಾರೆ. ಇದಾದ, ಬಳಿಕವೂ ಕರೆ ಸ್ವೀಕರಿಸದ ಕಾರಣ ಮಾರ್ಚ್ 27ರಂದು ಡೆತ್ ನೋಟ್ ಬರೆದಿಟ್ಟು ಡಿಯಾಗೋ ದಂಪತಿ ಆತ್ಮಹತ್ಯೆ ಮಾಡಿಕೊಂಡಿತ್ತು.