ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಹೆಚ್ಚಾದ ಹಿನ್ನಲೆ ಐಪಿಎಲ್ ಸೀಸನ್ 18 ಅನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿತ್ತು. ಇಂದು ಪಾಕಿಸ್ತಾನ ಮತ್ತು ಭಾರತ ಕದನ ವಿರಾಮ ಘೋಷಿಸಿದೆ. ಹಾಗಾಗಿ ಇದೀಗ ಮೂರು ನಗರಗಳಲ್ಲಿ ಮುಂದಿನ ಪಂದ್ಯಗಳನ್ನು ನಡೆಸಲು ಪ್ಲಾನ್ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಕಾರ್ಯಾಚರಣೆಗೆ ತಾತ್ಕಾಲಿಕ ಕದನವಿರಾಮ ಘೋಷಣೆಯಾಗಿದೆ. ಇದರಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್ 2025ರ ಎರಡನೇ ಹಂತ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಆದರೆ, ವಿದೇಶಿ ಆಟಗಾರರ ಆಗಮನ ಮತ್ತು ಗಡಿಯಲ್ಲಿನ ಉದ್ವಿಗ್ನತೆಯಿಂದಾಗಿ ಲೀಗ್‌ನ ತಕ್ಷಣದ ಆರಂಭ ಅನುಮಾನದಲ್ಲಿದೆ. ಬಿಸಿಸಿಐ ಸರ್ಕಾರದೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ.
ಅದರಂತೆ ಇದೀಗ ಮುಂದಿನ ಪಂದ್ಯಕ್ಕೆ ಬಿಸಿಸಿಐ ಮೂರು ಮೈದಾನಗಳನ್ನು ಸೂಚಿಸಿದ್ದು, ಉಳಿದ 16 ಪಂದ್ಯಗಳು ಅಲ್ಲೇ ನಡೆಸಲು ಚಿಂತನೆ ನಡೆಸಲಾಗಿದೆ. ಉತ್ತರ ಭಾರತದಲ್ಲಿ ಯುದ್ಧದ ಭೀತಿ ಹೆಚ್ಚಿರುವ ಹಿನ್ನಲೆ ಮುಂದಿನ ಪಂದ್ಯಾಟವನ್ನು ದಕ್ಷಿಣ ಭಾರತದ ನಗರಗಳಾದ ಬೆಂಗಳೂರು, ಚೆನ್ನೈ, ಹಾಗೂ ಹೈದರಾಬಾದ್ ನಲ್ಲಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಲಾಗುತ್ತಿದೆ.ಒಂದು ವೇಳೆ ಬಿಸಿಸಿಐನ ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದರೆ ಕೆಲವೇ ದಿನಗಳಲ್ಲಿ ಪಂದ್ಯಾಟ ಪುನಾರಂಭ ಆಗಲಿದೆ ಎನ್ನಲಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದ್ದ ಬಿಸಿಸಿಐ ಮೇ 9 ರ ಶನಿವಾರ, ಐಪಿಎಲ್ 2025 ರ ಸೀಸನ್ ಅನ್ನು ಒಂದು ವಾರ ಮುಂದೂಡುವುದಾಗಿ ಘೋಷಿಸಿತ್ತು. ಆದರೆ ದಿನೇ ದಿನೇ ಉಭಯ ದೇಶಗಳ ನಡುವಿನ ಸೇನಾ ಕಾರ್ಯಾಚರಣೆ ಜೋರಾದ ಕಾರಣ, ವಾರದ ಬಳಿಕವೂ ಐಪಿಎಲ್ ಆರಂಭವಾಗುವುದು ಕಷ್ಟ ಎಂದು ತೋರುತ್ತಿತ್ತು. ಹೀಗಾಗಿ ಪಂದ್ಯಾವಳಿ ನಡೆಸಲು ಬೇರೆ ದಾರಿಯನ್ನು ಹುಡುಕಲು ಮುಂದಾಗಿದ್ದ ಬಿಸಿಸಿಐ, ವಿದೇಶದಲ್ಲಿ ಲೀಗ್ ನಡೆಸಲು ಚಿಂತಿಸಿತ್ತು. ಆದರೀಗ ಕದನ ವಿರಾಮ ಘೋಷಣೆಯಾಗಿರುವುದರಿಂದ ಪಂದ್ಯಾವಳಿ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿವೆ.
ಕದನ ವಿರಾಮ ಘೋಷಣೆ ಮಾಡಿದ ನಂತರ, ಎರಡೂ ದೇಶಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಂದ್ಯಾವಳಿ ಮತ್ತೆ ಪ್ರಾರಂಭವಾಗಬಹುದೆಂಬ ಭರವಸೆಯನ್ನು ಹೊಂದಿದ್ದಾರೆ. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ 57 ಪಂದ್ಯಗಳು ಪೂರ್ಣಗೊಂಡಿದ್ದು, 58 ನೇ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಈ ರೀತಿಯಾಗಿ ಸೀಸನ್‌ನಲ್ಲಿ ಒಟ್ಟು 17 ಪಂದ್ಯಗಳು ಉಳಿದಿವೆ. ಅಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಮತ್ತೊಮ್ಮೆ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ.