ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜೊತೆಗೆ ಐದು ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಪ್ರಾಧಿಕಾರ ಹಾಗೂ ಐದು ನಗರ ಪಾಲಿಕೆಗಳಿಗೆ ಆಯುಕ್ತರು, ವಿಶೇಷ ಆಯಕ್ತರುಗಳನ್ನು ನೇಮಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಆ ಮೂಲಕ ಬಿಬಿಎಂಪಿ ಇತಿಹಾಸ ಪುಟ ಸೇರಿತು.
ಇಂದಿನಿಂದ ಐದು ನಗರ ಪಾಲಿಕೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದ್ದು, ಬುಧವಾರದಿಂದ ಆಯಾ ನಗರ ಪಾಲಿಕೆಗಳು ತೆರಿಗೆ ಸಂಗ್ರಹ ಮಾಡಲಿದೆ. ಇತ್ತ ಜಿಬಿಎ ಕೇಂದ್ರ ಕಚೇರಿಯಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಬ ನಾಮಫಲಕ ತೆಗೆದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಫಲಕವನ್ನು ಅಳವಡಿಸಲಾಗಿದೆ.
ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ವಿಮ ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಪ್ರತಿ ನಗರ ಪಾಲಿಕೆಗಳು ತಲಾ ಎರಡು ವಲಯಗಳಂತೆ ಒಟ್ಟು 10 ವಲಯಗಳನ್ನು ಹೊಂದಿರಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 198 ವಾರ್ಡುಗಳನ್ನೇ ಐದು ನಗರ ಪಾಲಿಕೆಗಳಿಗೆ ವಿಂಗಡನೆ ಮಾಡಲಾಗಿದೆ.
ಪಾಲಿಕೆ ವಾರ್ಡುಗಳ ವಿಂಗಡನೆ ಹೇಗಿದೆ?
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಂತಿನಗರ, ಸಿ.ವಿ.ರಾಮನ್ ನಗರ ಹಾಗೂ ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಚಾಮರಾಜಪೇಟೆ ಕ್ಷೇತ್ರಗಳು ಬರಲಿವೆ. ಒಟ್ಟು 42 ವಾರ್ಡುಗಳು ಸದ್ಯಕ್ಕೆ ವಿಂಗಡನೆ ಮಾಡಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹದೇವಪುರ ಹಾಗೂ ಕೆ.ಆರ್.ಪುರಂ ಕ್ಷೇತ್ರಗಳು ಬರಲಿದ್ದು, ಒಟ್ಟು 17 ವಾರ್ಡುಗಳನ್ನು ಸದ್ಯಕ್ಕೆ ವಿಂಗಡನೆ ಮಾಡಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾಟರಾಯನಪುರ, ಪುಲಕೇಶಿನಗರ, ಸರ್ವಜ್ಞನಗರ, ದಾಸರಹಳ್ಳಿ ಕ್ಷೇತ್ರದ ಕೆಲ ಭಾಗಗಳು, ಆರ್.ಆರ್.ನಗರ ಕ್ಷೇತ್ರದ ಕೆಲ ಭಾಗ, ಹೆಬ್ಬಾಳ, ಯಲಹಂಕ ಕ್ಷೇತ್ರಗಳು ಬರಲಿದ್ದು, ಒಟ್ಟು 41 ವಾರ್ಡುಗಳನ್ನು ಹಂಚಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪದ್ಮನಾಭನಗರ ಕ್ಷೇತ್ರದ ಕೆಲ ಭಾಗ, ಆರ್.ಆರ್.ನಗರ ಕ್ಷೇತ್ರದ ಕೆಲ ಭಾಗ, ಯಶವಂತಪುರ ಕ್ಷೇತ್ರದ ಕೆಲಭಾಗ, ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಬಡಾವಣೆ, ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಆನೇಕಲ್ ಕ್ಷೇತ್ರದ ಕೆಲ ಭಾಗಗಳನ್ನು ಸೇರಿಸಲಾಗಿದ್ದು, ಸದ್ಯ 37 ವಾರ್ಡುಗಳನ್ನು ಹಂಚಿಕೆ ಮಾಡಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಶವಂತಪುರ ಕ್ಷೇತ್ರದ ಒಂದು ಭಾಗ, ದಾಸರಹಳ್ಳಿ, ಆರ್.ಆರ್.ನಗರ, ಮಹಾಲಕ್ಷ್ಮಿ ಬಡಾವಣೆ, ಮಲ್ಲೇಶ್ವರ, ರಾಜಾಜಿನಗರ, ಗೋವಿಂದರಾಜನಗರ, ವಿಜಯನಗರ, ಬಸವನಗುಡಿ ಮತ್ತು ಪದ್ಮನಾಭನಗರ ಕ್ಷೇತ್ರದ ಕೆಲ ಭಾಗಗಳು ಸೇರಲಿದ್ದು, ಸದ್ಯ ಒಟ್ಟು 64 ವಾರ್ಡುಗಳನ್ನು ವಿಂಗಡಿಸಿ ಹಂಚಲಾಗಿದೆ.