ಬೆಂಗಳೂರು : ಬೆಂಗಳೂರಲ್ಲಿ ಕಸ ಸಂಗ್ರಹ ಇದೀಗ ಸ್ಥಗಿತವಾಗಿದೆ. ಇದಕ್ಕೆ ಕಾರಣ ಬಿಬಿಎಂಪಿ ಚಾಲಕರು ಹಾಗೂ ಕ್ಲೀನರ್ಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರಿಂದ ಸಿಲಿಕಾನ್ ಸಿಟಿಯಲ್ಲಿ ಕಸ ಸಂಗ್ರಹ ಸಮಸ್ಯೆ ಎದುರಾಗಿದೆ.
ಹೌದು ಬಿಬಿಎಂಪಿ ವಿರುದ್ಧ ಘನತ್ಯಾಜ್ಯ ನಿರ್ವಹಣಾ ಘಟಕದ ವಿರುದ್ಧ ಚಾಲಕರು ಮತ್ತು ಕ್ಲೀನರ್ಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಪರಿಣಾಮವಾಗಿ 5,300 ಆಟೋ ಟಿಪ್ಪರ್‌ಗಳು ಮತ್ತು 700 ಕಸದ ಲಾರಿಗಳ ಸಂಚಾರ ಸ್ಥಗಿತಗೊಂಡು, ನರದಾದ್ಯಂತ ಕಸ ಸಂಗ್ರಹಣೆಗೆ ಅಡಚಣೆ ಉಂಟಾಗಿದೆ.
ಬಿಬಿಎಂಪಿ ಪ್ರಧಾನ ಕಚೇರಿ ಬಳಿ 500ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆ ಮಾಡಿದರು. ಈ ವೇಳೆ ಕಚೇರಿ ಪ್ರವೇಶಿಸಲು ಪೊಲೀಸರು ಅವಕಾಶ ನೀಡದೇ ಹಲವರನ್ನು ವಶಕ್ಕೆ ಪಡೆದರು ಎಂದು ಮುಷ್ಕರದ ನೇತೃತ್ವ ವಹಿಸಿರುವ ಕಾರ್ಮಿಕ ಸಂರಕ್ಷಣೆ ಸಂಘಟನೆಯ ಅಧ್ಯಕ್ಷ ತ್ಯಾಗರಾಜ್ ತಿಳಿಸಿದ್ದಾರೆ.
ಚಾಲಕರು ಮತ್ತು ಕ್ಲೀನರ್ಗಳನ್ನು ಬಿಬಿಎಂಪಿ ಬಹಳ ವರ್ಷಗಳಿಂದ ನಿರ್ಲಕ್ಷಿಸುತ್ತಿದೆ. ನಮ್ಮ ಬೇಡಿಕೆ ನ್ಯಾಯಬದ್ಧವಾಗಿದೆ. ಗುತ್ತಿಗೆದಾರರನಿಂದ ನಮ್ಮನ್ನು ನೇಮಿಸಿಕೊಳ್ಳುವ ಬದಲು ನೇರ ಪಾವತಿ ಯೋಜನೆ ಅಡಿ ನೇಮಿಸಿಕೊಳ್ಳಬೇಕು. ಕಡಿಮೆ ಸಂಖ್ಯೆಯಿಂದ ಆರಂಭವಾಗಿರುವ ಪ್ರತಿಭಟನೆಗೆ ಸಾವಿರಾರು ಜನರು ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.