ಬೆಳಗಾವಿ : ಬಸವಣ್ಣನವರು ಲಿಂಗಾಯತ ಧರ್ಮವನ್ನು ಮಾಡಿಲ್ಲ, ಕೆಲವು ಕಂಪನಿಗಳು ಅದನ್ನು ತಯಾರು ಮಾಡಿಕೊಂಡಿವೆ. ಬಸವಣ್ಣನವರು ಹಿಂದೂ ಸಮಾಜದಲ್ಲಿ ಮೌಢ್ಯಗಳ ವಿರುದ್ಧ ಹೋರಾಡಿದ್ದಾರೆಯೇ ಹೊರತು ಲಿಂಗಾಯತ ಧರ್ಮವನ್ನು ಸ್ಥಾಪನೆಯೇ ಮಾಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು.
ರಾಯಭಾಗ ತಾಲೂಕಿನ ಹಾರುಗೇರಿಯಲ್ಲಿ ಪಂಚಮಸಾಲಿ ಮೀಸಲಾತಿ ಎಂಟನೇ ಹಂತದ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವು ಮಠಾಧೀಶರು ವೀರಶೈವ ಲಿಂಗಾಯತ ಎಂದು ಜಾತಿಗಣತಿಯಲ್ಲಿ ಉಲ್ಲೇಖಿಸುವಂತೆ ಹೇಳುತ್ತಿದ್ದಾರೆ. ಆದರೆ ಎಲ್ಲಿಯವರೆಗೆ ಕೇಂದ್ರ ಸರ್ಕಾರ ವೀರಶೈವ ಲಿಂಗಾಯತ ಎಂದು ಅಧಿಕೃತವಾಗಿ ಘೋಷಣೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಈ ರೀತಿ ನಾವು ಬರೆಸಿದರೆ ಯಾವುದೇ ಅರ್ಥವಿಲ್ಲ. ಕೆಲವು ಮೂರ್ಖರು ಲಿಂಗಾಯತ ಸಮುದಾಯವನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ ಎಂದು ಯತ್ನಾಳ್ ಹರಿಹಾಯ್ದರು.
ಧರ್ಮ ಎಂದಲ್ಲಿ ಹಿಂದೂ ಎಂದೇ ಬರೆಸಬೇಕು, ಜಾತಿ ಕಾಲಂನಲ್ಲಿ ಲಿಂಗಾಯತ, ಪಂಚಮಸಾಲಿ ಏನಿದೆಯೋ ಅದನ್ನು ಬರೆಸಬೇಕು, ಸರ್ಕಾರದ ಮೀಸಲಾತಿಯಲ್ಲಿ ವೀರಶೈವ ಲಿಂಗಾಯತ ಎಂಬುದೇ ಇಲ್ಲ, ಆರು ಧರ್ಮಕ್ಕೆ ಮಾತ್ರ ನಮ್ಮ ಸಂವಿಧಾನದಲ್ಲಿ ಅವಕಾಶ ಇದೆ. ಧರ್ಮ ಎಂದು ಘೋಷಿಸದಿರುವುದನ್ನು ಸೇರಿಸಿ ಭವಿಷ್ಯದ ನಮ್ಮ ಮಕ್ಕಳನ್ನು ಕೊಲೆ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.