ಶಿವಮೊಗ್ಗ : ಇತ್ತೀಚೆಗೆ ಹುಲಿಕಲ್ ಘಾಟ್ ನಲ್ಲಿ ನಡೆದ ಭೂಕುಸಿತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಹಾಗಾಗಿ ಹುಲಿಕಲ್ ಘಾಟ್ನಲ್ಲಿ ಮತ್ತೆ ಭೂಕುಸಿತ ಉಂಟಾದ ಕಾರಣ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ರಸ್ತೆಯ ಸುರಕ್ಷತಾ ಕಾಮಗಾರಿ ಮುಗಿಯುವವರೆಗೆ ಈ ನಿರ್ಬಂಧ ಅನ್ವಯವಾಗಲಿದೆ. ಎಲ್ಲಾ ವಾಹನಗಳಿಗೂ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ಹೌದು ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಕಾಂಕ್ರೀಟ್ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡು ಬಂದ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ರಸ್ತೆಯು ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಘಾಟ್ನ ಹೇರ್ಪಿನ್ ತಿರುವಿನಲ್ಲಿ ರಕ್ಷಣಾತ್ಮಕ ಕಾಮಗಾರಿಯೂ ಪೂರ್ಣಗೊಳ್ಳುವವರೆಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತೀರ್ಥಹಳ್ಳಿ ಕಡೆಯಿಂದ ಕುಂದಾಪುರ ಕಡೆಗೆ ತೆರಳುವ ವಾಹನಗಳು, ತೀರ್ಥಹಳ್ಳಿ-ರಾವೆ-ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ತೆರಳಬೇಕು. ಇನ್ನು ತೀರ್ಥಹಳ್ಳಿಯಿಂದ ಯಡೂರು, ಹುಲಿಕಲ್ ಮಾರ್ಗವಾಗಿ ತೆರಳುವವರು ತೀರ್ಥಹಳ್ಳಿ-ಯಡೂರು, ಮಾಸ್ತಿಕಟ್ಟೆ- ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು. ಶಿವಮೊಗ್ಗ/ಇನ್ನು ಸಾಗರ ಕಡೆಯಿಂದ ಹೊಸನಗರ ಮೂಲಕ ತೆರಳುವವರು ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳಿ ಭಟ್ಕಳ-ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ತೆರಳಬೇಕು.








