ಕೊಡಗು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಕಳೆದ ಹಲವು ದಿನಗಳಿಂದ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು. ಇದೀಗ ಕೊಡಗಿನಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ನೊಂದು ಮಹಿಳೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆಯ ಶನಿವಾರ ಸಂತೆಯಲ್ಲಿ ನಡೆದಿದೆ.
ಹೌದು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದ್ದು, ಹಸೀನಾ ಎನ್ನುವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯ ಶನಿವಾರ ಸಂತೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಫೈನಾನ್ಸ್ ಸಂಸ್ಥೆಗಳ ಏಜೆನ್ಸಿಗಳ ವಿರುದ್ಧ ಕುಟುಂಬಸ್ಥರು ಕಿರುಕುಳದ ಕುರಿತು ಆರೋಪಿಸಿದ್ದಾರೆ.
ಹಸೀನಾ ಕೆಲವು ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದಿದ್ದರು. ಸಾಲ ಮರುಪಾವತಿಸದಕ್ಕೆ ಹಸಿನಾಗಿ ಕರೆ ಮಾಡಿ ಸಿಬ್ಬಂದಿಗಳು ಬೆದರಿಕೆ ಹಾಕಿದ್ದರು ಎಂದು ಫೈನಾನ್ಸ್ ಏಜೆಂಟರ ವಿರುದ್ಧ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಘಟನೆ ಕುರಿತು ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದರ ಬೆನ್ನಲ್ಲೇ ಇಂದು ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆ ಜಾರಿ ಸಂಬಂಧ ರಾಜ್ಯಪಾಲರು ಸುಗ್ರೀವಾಜ್ಞೆ ಜಾರಿಗೆ ಅಂಕಿತ ಹಾಕಿದ್ದಾರೆ ಎಂದು ತಿಳಿದು ಬಂದಿದ್ದು, ಸರ್ಕಾರಕ್ಕೆ ಹಲವು ಸೂಚನೆ ನೀಡಿರುವ್ ರಾಜ್ಯಪಾಲರು ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ ಎಂದು ಸೂಚನೆ ನೀಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಕೊನೆಗೂ ಸುಗ್ರೀವಾಜ್ಞೆ ಜಾರಿಯಾಗಿದೆ.