ಬೆಳಗಾವಿ : ಕಳೆದ 2 ದಿನಗಳ ಹಿಂದೆ ವಿಜಯಪುರದಲ್ಲಿ ವಿದ್ಯುತ್ ತಗುಲಿ ಯುವಕನೊಬ್ಬ ಸಾವನ್ನಪ್ಪಿದ್ದ ಘಟನೆ ನಗರದ ಗಾಂಧಿ ಚೌಕ್ ಬಳಿ ನಡೆದಿತ್ತು. ಶುಭಂ (22) ಎಂಬ ಯುವಕ ಧ್ವಜದಿಂದ ವಿದ್ಯುತ್ ತಂತಿ ಮೇಲೇತ್ತುವಾಗ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ್ದಾನೆ. ಈ ಘಟನೆ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ವೇಳೆ ಹೊಂಡದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ.
ಹೌದು ಬೆಳಗಾವಿ ನಗರದ ಜಕ್ಕೇರಿ ಹೊಂಡದಲ್ಲಿ ಗಣೇಶ ವಿಸರ್ಜನೆ ವೇಳೆ ಹೊಂಡದಲ್ಲಿ ಮುಳುಗುತ್ತಿದ್ದ ಬೆಳಗಾವಿಯ ವಡ್ಡರವಾಡಿ ನಿವಾಸಿ ರಾಹುಲ್ ಬ್ಯಾಕವಾಡಕರ್ನನ್ನು ರಕ್ಷಣೆ ಮಾಡಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೂರ್ತಿ ವಿಸರ್ಜನೆ ಮಾಡಿ ಹಿಂದಿರುಗುವಾಗ ಕೈ ಸೋತು ಶುಭಂ ಕುಪ್ಪಟಗೇರಿ ಕೊಚ್ಚಿಕೊಂಡು ಹೋಗಿದ್ದಾನೆ. ಶುಭಂ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಯಡೋಗ ನಿವಾಸಿ. ಯಡೋಗ-ಚಾಪಗಾವಿ ನಡುವಿನ ಮಲಪ್ರಭಾ ನದಿ ಸೇತುವೆ ಬಳಿ ಘಟನೆ ನಡೆದಿದೆ. ಸದ್ಯ ಎಸ್ಡಿಆರ್ಎಫ್ ಸಿಬ್ಬಂದಿಯಿಂದ ಶುಭಂ ಕುಪ್ಪಟಗೇರಿಗಾಗಿ ಶೋಧ ನಡೆದಿದೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.