ಮಂಗಳೂರು : ಇತ್ತೀಚಿಗೆ ಮಂಗಳೂರಲ್ಲಿ ರೌಡಿ ಶೀಟರ್ ಹಾಗು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಭೀಕರ ಕೊಲೆಯಾಗಿತ್ತು. ಘಟನೆ ಮಾಸುವ ಮುನ್ನವೇ ಮಂಗಳೂರಲ್ಲಿ ಮತ್ತೊಂದು ಕೊಲೆಯಾಗಿದೆ. ಮದುವೆಯಾದ ಆರೇ ತಿಂಗಳಲ್ಲಿ ಪತ್ನಿ ತನ್ನನ್ನು ತೊರೆದು ತವರು ಮನೆ ಸೇರಿದ್ದಾಳೆ ಎಂಬ ಸಿಟ್ಟಿಗೆ ಪತಿಯು ಮದುವೆ ಮಾಡಿಸಿದ್ದ ದಲ್ಲಾಳಿಯನ್ನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.
ಕೊಲೆಯಾದ ವ್ಯಕ್ತಿಯನ್ನು ವಾಮಂಜೂರಿನ ಸುಲೇಮಾನ್ (50) ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸುಲೇಮಾನ್ ಅವರ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ. ಸುಲೇಮಾನ್ ಅವರ ಸಂಬಂಧಿ ವಳಚ್ಚಿಲ್ ನಿವಾಸಿ ಮುಸ್ತಾಫಾ (30) ಕೊಲೆ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಮೃತ ಸುಲೇಮಾನ್, ವಿವಾಹ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಆರೋಪಿ ಮುಸ್ತಫಾ ಎಂಬಾತನಿಗೆ ಮಹಿಳೆಯೊಂದಿಗೆ ಸುಮಾರು 8 ತಿಂಗಳ ಹಿಂದೆ ವಿವಾಹ ಮಾಡಿಸಿದ್ದರು. ಆದರೆ, ವೈವಾಹಿಕ ಜೀವನದಲ್ಲಿ ಉಂಟಾದ ಕಲಹದಿಂದ ಮಹಿಳೆಯು ಎರಡು ತಿಂಗಳ ಹಿಂದೆ ತಮ್ಮ ತವರು ಮನೆಗೆ ಮರಳಿದ್ದರು. ಇದರಿಂದ ಮುಸ್ತಫಾ ಮತ್ತು ಸುಲೇಮಾನ್ ನಡುವೆ ಒಡಕು ಉಂಟಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.