ವಿಜಯಪುರ : ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್ ಗೆ ಉತ್ತರಿಸಿಲ್ಲ ಹಾಗು ಸ್ವಪಕ್ಷದ ನಾಯಕರ ವಿರುದ್ಧವೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿನ್ನೆ ಬಿಜೆಪಿ ರಾಷ್ಟೀಯ ಶಿಸ್ತು ಸಮಿತಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶಿಸಿದೆ.
ಯತ್ನಾಳ್ ಪಕ್ಷದಿಂದ ಉಚ್ಚಾಟನೆ ಆದ ಬೆನ್ನಲ್ಲೇ ವಿಜಯಪುರ ನಗರದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ನಿನ್ನೆ ಬಿಜೆಪಿಯ ಹಲವು ಮುಖಂಡರು ವಿವಿಧ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.ಅತ್ತ ಅವರನ್ನು ಉಚ್ಚಾಟನೆ ಮಾಡುತ್ತಿದ್ದಂತೆ ಇತ್ತ ಯತ್ನಾಳ್ರನ್ನು ಬೆಂಬಲಿಸಿ ನಿನ್ನೆ ರಾಜೀನಾಮೆ ನೀಡಿದ್ದ ಪದಾಧಿಕಾರಿ ಇಂದು ಅಪಘಾತದಲ್ಲಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.ಬಿಜೆಪಿ ನಗರ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಸಂತೋಷ್ ತಟಗಾರ ಮೃತ ಪದಾಧಿಕಾರಿ. ಸಂತೋಪ್ ತಟಗಾರ ಪ್ರಯಾಣಿಸುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ.