ಬೆಂಗಳೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಮತ್ತು ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ದೊರಕಿಸಿಕೊಡುವ ಉದ್ದೇಶದಿಂದ, ವೈದ್ಯಾಧಿಕಾರಿಗಳ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ‘ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ವೈದ್ಯಕೀಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2026’ ರ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಪ್ರಮುಖ ಬದಲಾವಣೆಗಳು ಮತ್ತು ಹೊಸ ನಿಯಮಗಳು:
ಖಾಲಿ ಹುದ್ದೆಗಳ ಭರ್ತಿಗೆ ಆದ್ಯತೆ: ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ, ಯಾವುದೇ ಸರ್ಕಾರಿ ಆಸ್ಪತ್ರೆ ಅಥವಾ ಸಂಸ್ಥೆಗಳಲ್ಲಿ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದ್ದಲ್ಲಿ, ಅಂತಹ ಕಡೆ ವೈದ್ಯರ ನಿಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ತುರ್ತು ಸೇವೆಗಳ ಲಭ್ಯತೆ: ಸಾರ್ವಜನಿಕರಿಗೆ ಅಗತ್ಯವಿರುವ ಕೆಲವು ‘ನಿರ್ಣಾಯಕ ಸೇವೆಗಳನ್ನು’ (Critical Services) ಒದಗಿಸಲು ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟ ಖಾಲಿ ಹುದ್ದೆಗಳನ್ನು ಗುರುತಿಸಿ ಭರ್ತಿ ಮಾಡಲಿದೆ.
ವಿಶೇಷ ವಿನಾಯಿತಿಗಳು: * ತಮ್ಮ ಸೇವೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ವರ್ಗಾವಣೆಯಲ್ಲಿ ವಿಶೇಷ ಪರಿಗಣನೆ ನೀಡಲಾಗುವುದು.
ತೀವ್ರ ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟಿನ ಕಾರಣದಿಂದಾಗಿ ಒಂದು ವರ್ಷದ ವಿನಾಯಿತಿ ಬಯಸುವ ವೈದ್ಯರ ಮನವಿಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ಪರಿಶೀಲಿಸಲಿದೆ.
ಡಿಜಿಟಲ್ ಪ್ರಮಾಣಪತ್ರ ಕಡ್ಡಾಯ: ಅಂಗವೈಕಲ್ಯದ ಆಧಾರದ ಮೇಲೆ ವಿನಾಯಿತಿ ಪಡೆಯಲು ಇನ್ನು ಮುಂದೆ ಜಿಲ್ಲಾ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರದ ಬದಲಾಗಿ, ಸ್ವಾವಲಂಬನ್ ಪೋರ್ಟಲ್ ಅಡಿಯಲ್ಲಿ ನೀಡಲಾದ UDID ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ.
ಸಾರ್ವಜನಿಕರ ಗಮನಕ್ಕೆ:
ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ, ಸಾರ್ವಜನಿಕರು ರಾಜ್ಯಪತ್ರದಲ್ಲಿ ಪ್ರಕಟವಾದ 15 ದಿನಗಳ ಒಳಗಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇಲ್ಲಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ.
ಈ ಹೊಸ ನಿಯಮಗಳು 2026ನೇ ಸಾಲಿನ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಿಂದ ಜಾರಿಗೆ ಬರಲಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.









