ರಾಮನಗರ : ವಿದ್ಯಾರ್ಥಿನಿಯರಿಗೆ ಮದ್ಯ ಕುಡಿಸಿ ಡ್ಯಾನ್ಸ್ ಮಾಡುವಂತೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕನಕಪುರ ಪಟ್ಟಣದ ರೂರಲ್ ಪದವಿ ಪೂರ್ವ ಕಾಲೇಜಿನ ಮೂವರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ.
ವಿದ್ಯಾರ್ಥಿನಿಯರಿಗೆ ಬಿಯರ್ ಕುಡಿಸಿ, ಡ್ಯಾನ್ಸ್ ಮಾಡುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ಕನಕಪುರ ಪಟ್ಟಣದ ರೂರಲ್ ಪದವಿ ಪೂರ್ವ ಕಾಲೇಜಿನ ಮೂವರು ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಉಪನ್ಯಾಸಕರಾದ ವಿಶ್ವನಾಥ್, ಲಕ್ಷ್ಮೀಶ್, ನಾಗೇಶ್ ಅವರನ್ನು ಅಮಾನತು ಮಾಡಲಾಗಿದೆ.
ಅಕ್ಟೋಬರ್ 09 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಡಿಕೇರಿ ಪ್ರವಾಸ ಆಯೋಜಿಸಲಾಗಿತ್ತು. ಪ್ರವಾಸದಲ್ಲಿ ಪ್ರಾಂಶುಪಾಲರು ಬಿಯರ್ ಕುಡಿದಿದ್ದಾರೆ. ಬಳಿಕ ಮೂವರು ವಿದ್ಯಾರ್ಥಿನಿಯರನ್ನು ಕೋಣೆಯಲ್ಲಿ ಕೂಡಿಹಾಕಿ ಬಲವಂತವಾಗಿ ಬಿಯರ್ ಕುಡಿಸಿದ್ದಾರೆ. ಅಲ್ಲದೇ, ತಮ್ಮ ಜೊತೆ ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.