ಹೊಸದಿಲ್ಲಿ: 2023ರ ಡಿ.13 ರಂದು ಸಂಸತ್ ಭವನದಲ್ಲಿ ಸಂಭವಿಸಿದ್ದ ಭದ್ರತಾ ವೈಫಲ್ಯ ಹಿನ್ನಲೆಯಲ್ಲಿ ಮುಂಬರುವ ಬಜೆಟ್ ಅಧಿವೇಶನದ ವೇಳೆ ಸಂಸತ್ಗೆ ವಿಮಾನ ನಿಲ್ದಾಣದ ಮಾದರಿಯಲ್ಲಿ ಹೊಸ ಮಾದರಿಯ ಭದ್ರತೆ ಒದಗಿಸಲಾಗಿದೆ.ಇದರ ಪ್ರಯುಕ್ತ ಕೇಂದ್ರ ಸರ್ಕಾರವು 140 CISF ಸಿಬ್ಬಂದಿ ನಿಯೋಜನೆ ಮಾಡಿದ್ದೂ, ಬ್ಯಾಗ್ ಮತ್ತಿತರ ವಸ್ತುಗಳ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
2023ರ ಡಿ.13 ರಂದು ಸಂಸತ್ ಭವನದಲ್ಲಿ ಸಂಭವಿಸಿದ್ದ ಭದ್ರತಾ ವೈಫಲ್ಯ ಹಿನ್ನಲೆಯಲ್ಲಿ ಮುಂಬರುವ ಬಜೆಟ್ ಅಧಿವೇಶದ ವೇಳೆ ಅಹಿತಕರ ಘಟನೆ ತಡೆಯಲು ಸಂದರ್ಶಕರು ತರುವ ಬ್ಯಾಗ್ ಮತ್ತಿತರ ವಸ್ತುಗಳನ್ನು ಪರಿಶೀಲಿಸಲು ಕೇಂದ್ರೀಯ ಭದ್ರತಾ ಪಡೆಯ (ಸಿಐಎಸ್ಎಫ್) 140 ಯೋಧರನ್ನು ನಿಯೋಜಿಸಲಾಗಿದೆ.
ಅಲ್ಲದೇ ಏರ್ಪೋರ್ಟ್ ಮಾದರಿಯ ಭದ್ರತೆ ನೀಡಲು ಗೃಹ ಸಚಿವಾಲಯ ಸೂಚಿಸಿದ್ದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಿದಂತೆ ಸಂಸತ್ ಭವನಕ್ಕೆ ಬರುವ ಸಂದರ್ಶನಕರನ್ನು ಸಿಐಎಸ್ ಎಫ್ ಪರೀಕ್ಷೆಗೆ ಒಳಪಡಿಸಲಿದೆ.ಸಂಸತ್ ಭವನಕ್ಕೆ ಆಗಮಿಸುವ ಸಂದರ್ಶಕರನ್ನು ಎಕ್ಸ್-ರೇ ಸ್ಕ್ಯಾನ್ ಮಷಿನ್ ಮೂಲಕ ಪರೀಕ್ಷಿಸಲಾಗುತ್ತದೆ. ಪ್ರತಿಯೊಬ್ಬರ ಶೂ, ಬೆಲ್ಟ್, ಜಾಕೆಟ್ ಮೊದಲಾದ ವಸ್ತುಗಳನ್ನು ಎಕ್ಸ್-ರೇ ಮಷಿನ್ನಲ್ಲಿ ಸ್ಕ್ಯಾನ್ ಮಾಡಿ ಒಳಬಿಡಲಾಗುತ್ತದೆ.
ಕೇಂದ್ರ ಗೃಹ ಸಚಿವಾಲಯ ಆದೇಶದಂತೆ ಜ.31 ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದ ವೇಳೆ ಸಂಸತ್ಗೆ ಭದ್ರತೆ ನೀಡುವ ಹೊಣೆ ಹೊತ್ತಿರುವ ಸಿಐಎಸ್ಎಫ್ ಪಡೆಗೆ ಪ್ರತಿಯೊಬ್ಬರ ಸಂದರ್ಶಕರ ಬ್ಯಾಗ್ ಗಳನ್ನು ಪರೀಕ್ಷಿಸಿ, ಒಳಬಿಡುವ ಜತೆಗೆ ಕಟ್ಟಡವನ್ನು ಅಗ್ನಿ ಅನಾಹುತಗಳಿಂದ ರಕ್ಷಿಸುವ ಜವಾಬ್ದಾರಿ ನೀಡಲಾಗಿದೆ. ಭದ್ರತಾ ಶಿಷ್ಟಾಚಾರ ನಿಯಮದಂತೆ ಆವರಣ ಹಾಗೂ ಒಳಗಡೆ ಯಾವುದೇ ರೀತಿಯ ಪೋಟೊ, ಸೆಲ್ಪಿ, ವಿಡಿಯೊಗ್ರಫಿ ಮಾಡದಂತೆ ನಿಷೇಧಿಸಲಾಗಿದೆ.