ಬೆಂಗಳೂರು : ಇರಾನ್- ಇಸ್ರೇಲ್ ಯುದ್ಧದಿಂದಾಗಿ ಮಾರುಕಟ್ಟೆಯಲ್ಲಿ ಡ್ರೈ ಫ್ರೂಟ್ಸ್ ಅಭಾವ ಸೃಷ್ಟಿಯಾಗಿದ್ದು, ಬೆಲೆ ಗಗನಮುಖಿಯಾಗಿದೆ. ಈ ಒಂದು ಯುದ್ಧದ ಪರಿಣಾಮ ಭಾರತದ ಮೇಲು ಬಿರಿದ್ದು ಇದೀಗ ಕರ್ನಾಟಕದಲ್ಲಿ ಡ್ರೈ ಫ್ರೂಟ್ಸ್ ದರದಲ್ಲಿ ಭಾರಿ ಏರಿಕೆಯಾಗಿದೆ.
ಪ್ರಸ್ತುತ ಇಸ್ಲಾಂ ಧರ್ಮದವರು ರಂಜಾನ್ ಪವಿತ್ರ ಆಚರಣೆಯಲ್ಲಿದ್ದಾರೆ. ಈ ತಿಂಗಳು ಹೆಚ್ಚು ಒಣಹಣ್ಣುಗಳ ಸೇವನೆ ಮೇಲೆ ಅವಲಂಬಿಸಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಯಾಗಿದ್ದು, ಒಣಹಣ್ಣುಗಳ ಬೆಲೆ ಗಗನಮುಖಿಯಾಗಿದೆ. ಹಾವೇರಿಯ ಪ್ರಮುಖ ಹಣ್ಣು ವ್ಯಾಪಾರಸ್ಥರಿಗೆ ಇದರ ಬಿಸಿ ತಟ್ಟಿದೆ. ಪರಿಣಾಮ ಒಂದೂವರೆ ಪಟ್ಟು ಅಧಿಕ ದರಕ್ಕೆ ಒಣಹಣ್ಣುಗಳ ಮಾರಾಟ ಮಾಡುತ್ತಿರುವುದಾಗಿ ಹಣ್ಣಿನ ವ್ಯಾಪಾರಸ್ಥರು ತಿಳಿಸಿದ್ದಾರೆ.
ದರ ಏರಿಕೆಯಿಂದ ಗ್ರಾಹಕರ ಸಂಖ್ಯೆ ಸಹ ಕಡಿಮೆಯಾಗಿದೆ. ಈ ಹಿಂದೆ ಕೆಜಿ ಖರೀದಿಸುತ್ತಿದ್ದ ಗ್ರಾಹಕರು ಈಗ ಅರ್ಧಕೆಜಿ ಖರೀದಿಸುತ್ತಿದ್ದಾರೆ. ಅಲ್ಲದೆ ನಮ್ಮ ಜೊತೆ ವಾದಕ್ಕೆ ಇಳಿಯುತ್ತಾರೆ. ರಂಜಾನ್ ಹಬ್ಬ ಬೇರೆ ಹತ್ತಿರ ಬರುತ್ತಿದೆ. ಇತ್ತ ದಿನದಿಂದ ದಿನಕ್ಕೆ ಡ್ರೈ ಫ್ರೂಟ್ಸ್ ಬೆಲೆ ಏರಿಕೆಯಾಗುತ್ತಿದೆ. ಪರಿಸ್ಥಿತಿ ನಿಭಾಯಿಸಲಾಗುತ್ತಿಲ್ಲ. ಆದಷ್ಟು ಬೇಗ ಈ ಬಿಕ್ಕಟ್ಟು ಶಮನವಾಗಲಿ ಎಲ್ಲವೂ ಮೊದಲಿನಂತಾಗಲಿ ಎಂದು ವರ್ತಕರು ತಿಳಿಸಿದ್ದಾರೆ.
ಇಸ್ರೇಲ್- ಇರಾನ್ ಯುದ್ಧದಿಂದಾಗಿ ಭಾರತಕ್ಕೆ ಡ್ರೈ ಫ್ರೂಟ್ಸ್ ಹಾಗೂ ಖರ್ಜೂರ ಆಮದಿನಲ್ಲಿ ವ್ಯತ್ಯಯವಾಗಿದೆ. ರಂಜಾನ್ ತಿಂಗಳಲ್ಲಿ ಖರ್ಜೂರಕ್ಕೆ ಬೇಡಿಕೆ ಇರುತ್ತದೆ. ಇರಾನ್ ಸೇಬಿಗೆ ಕೆಜಿಗೆ 200 ರೂ.ನಿಂದ 250 ರೂ. ಆಗಿದೆ. ಪಿಸ್ತಾ 1200 ರಿಂದ 1400 ರುಪಾಯಿ ಆಗಿದೆ. ಬಾದಾಮಿ, 900 ರಿಂದ 1200 ರೂ. ಹೆಚ್ಚಳ ಆಗಿದೆ. ಎಲ್ಲಾ ಡ್ರೈ ಫ್ರುಟ್ಸ್ ಬೆಲೆ 100 ರಿಂದ 200 ರೂ. ಹೆಚ್ಚಳ ಆಗಿದೆ. ಹೀಗಾಗಿ ಖರೀದಿ ಮಾಡುವ ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.








