ಗದಗ : ಹೊಳಿ ಹಬ್ಬದಂದೆ ಗದಗದಲ್ಲಿ ಘೋರವಾದ ಘಟನೆ ಸಂಭವಿಸಿದ್ದು, ಊರಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಗ್ರಾಮದ ತುಂಬೆಲ್ಲಾ ಹೋಳಿ ಆಟವಾಡಿ ಕೆರೆಯಲ್ಲಿ ಸ್ನಾನಕ್ಕೆ ಹೋದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ರಾಚನಗೌಡ (16) ಎಂದು ತಿಳಿದುಬಂದಿದೆ. ಗ್ರಾಮದ ಗುಂಡೇಶ್ವರ ಕೆರೆಯಲ್ಲಿ ದೇವೇಂದ್ರ ರಾಚನಗೌಡ ಹೊಳಿ ಹಬ್ಬ ಆಚರಣೆ ಬಳಿಕ ಕೆರೆಯಲ್ಲಿ ಈಜಲು ಮೂವರು ಸ್ನೇಹಿತರೊಂದಿಗೆ ತೆರಳಿದ್ದ. ಬೆಳಗ್ಗೆಯಿಂದ ಸ್ನೇಹಿತರೊಂದಿಗೆ ಊರಲ್ಲಿ ಬಣ್ಣದ ಹೋಳಿ ಆಟವಾಡಿದ್ದಾನೆ. ನಂತರ ನಾಲ್ಕು ಜನ ಸ್ನೇಹಿತರು ಒಟ್ಟಾಗಿ ಕೆರೆಗೆ ಈಜಲು ಹೋಗಿದ್ದರು.
ಮೂವರು ಕೆರೆಯಲ್ಲಿ ಈಜಬೇಕಾದರೆ ದೇವೇಂದ್ರ ಒಂದು ದಡದಿಂದ ಮತ್ತೊಂದು ದಡ ತಲುಪುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಕೆರೆಯ ಮಧ್ಯಭಾಗದ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾನೆ. ಜೊತೆಗೆ ಹೋಗಿದ್ದ ಸ್ನೇಹಿತರ ಮಾಹಿತಿಯ ಆಧಾರದ ಮೇರೆಗೆ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಯಿಂದ ಬಾಲಕನಿಗಾಗಿ ಶೋಧ ಕಾರ್ಯನಡೆಸಿದರು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನ ಮೃತ ದೇಹ ಹೊರತೆಗೆದಿದ್ದಾರೆ. ಈ ಕುರಿತು ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.