ಬೆಂಗಳೂರು : 2025-26 ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ ದಾಖಲಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗೆ ವಿವಿಧ ಹಂತದ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳು.
2010-11 ನೇ ಸಾಲಿನಿಂದ ಆದರ್ಶ ವಿದ್ಯಾಲಯಗಳು ಪ್ರಾರಂಭವಾಗಿದ್ದು, ಪ್ರತಿ ವರ್ಷದಂತೆ 2025-26ನೇ ಸಾಲಿನಲ್ಲೂ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿಗಾಗಿ ರಾಜ್ಯದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಈ ಪ್ರವೇಶ ಪರೀಕ್ಷೆಯು ದಿನಾಂಕ:23.03.2025 ರ ಭಾನುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ (2 ಗಂಟೆ 30 ನಿಮಿಷಗಳು) ನಡೆಯುತ್ತಿದ್ದು, ಸದರಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ವಿವಿಧ ಹಂತದ ಅಧಿಕಾರಿಗಳು ಮಾಡಿಕೊಳ್ಳಬೇಕಾಗಿದೆ.
ಪ್ರವೇಶ ಪರೀಕ್ಷೆಯ ವಿಧಾನ
ಪ್ರಶ್ನೆಪತ್ರಿಕೆ ಮತ್ತು ಒ.ಎಂ.ಆರ್‌ನ ಸ್ವರೂಪ:-
• ಪ್ರಶ್ನೆಪತ್ರಿಕೆಯು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಮುದ್ರಿತವಾಗಿರುತ್ತದೆ. ಇದು 100 ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆಪತ್ರಿಕೆಯಾಗಿದ್ದು, ಪ್ರತಿ ಪ್ರಶ್ನೆಗೆ 1 ಅಂಕದಂತೆ 100 ಅಂಕಗಳನ್ನು ಹೊಂದಿರುತ್ತದೆ.
ಪ್ರಶ್ನೆಪತ್ರಿಕೆಯು ಬಹುಆಯ್ಕೆ ಮಾದರಿಯ (Multipale Choice Questions-MCQs) ಪ್ರಶ್ನೆಗಳನ್ನು ಹೊಂದಿರುತ್ತದೆ.
ಪ್ರವೇಶ ಪರೀಕ್ಷೆಯು 5ನೇ ತರಗತಿಯ ಪಠ್ಯವಸ್ತುವಿನ ಕಲಿಕಾಂಶಗಳನ್ನು ಆಧರಿಸಿ, ಕನ್ನಡ ಭಾಷೆ(16%), ಆಂಗ್ಲ ಭಾಷೆ(16%), ಗಣಿತ(16%), ವಿಜ್ಞಾನ(16%), ಸಮಾಜ ವಿಜ್ಞಾನ(16%), ಸಾಮಾನ್ಯ ಜ್ಞಾನ(10%) ಮತ್ತು ಸಾಮಾನ್ಯ ಮಾನಸಿಕ ಸಾಮರ್ಥ್ಯ(10%) ವಿಷಯಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆಯ ಅವಧಿ 2 ಗಂಟೆ 30 ನಿಮಿಷಗಳಾಗಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳು ಮುಂಚಿತವಾಗಿ ಪರೀಕ್ಷಾ ಕೊಠಡಿಯಲ್ಲಿ ಹಾಜರಿರಬೇಕು.
ವಿದ್ಯಾರ್ಥಿಗಳು ಉತ್ತರಿಸಲು ಒ.ಎಂ.ಆರ್ ಹಾಳೆಯನ್ನು ನೀಡಲಾಗುವುದು.
ಒ.ಎಂ.ಆರ್‌ನಲ್ಲಿ ಕೊಠಡಿ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಸ್ಥಳದಲ್ಲಿ ಸಹಿ ಮಾಡುವುದು ಕಡ್ಡಾಯವಾಗಿರುತ್ತದೆ.
ಒ.ಎಂ.ಆರ್‌ನಲ್ಲಿ ವಿದ್ಯಾರ್ಥಿಗೆ ನೀಡಲಾದ ಪ್ರಶ್ನೆಪತ್ರಿಕೆಯ ವರ್ಷನ್ ಅನ್ನು ನಮೂದಿಸಿ ಶೇಡ್ ಮಾಡದಿದ್ದಲ್ಲಿ ಹಾಗೂ ವಿದ್ಯಾರ್ಥಿಯು ನಿಗದಿತ ಸ್ಥಳದಲ್ಲಿ ಸಹಿ ಮಾಡದಿದ್ದಲ್ಲಿ ಹಾಗೂ ಕೊಠಡಿ ಮೇಲ್ವಿಚಾರಕರಿಗೆ ನಿಗದಿಪಡಿಸಿರುವ ಸ್ಥಳದಲ್ಲಿ ವಿದ್ಯಾರ್ಥಿಗೆ ನೀಡಲಾದ ಪ್ರಶ್ನೆಪತ್ರಿಕೆಯ ವರ್ಷನ್ ಅನ್ನು ನಮೂದಿಸಿ ಸಹಿ ಮಾಡದಿದ್ದಲ್ಲಿ ವಿದ್ಯಾರ್ಥಿಯನ್ನು ಗೈರುಹಾಜರು ಎಂದು ಪರಿಗಣಿಸಲಾಗುವುದು. ಈ ಮೂರು ಅಂಶಗಳಿಂದ ವಿದ್ಯಾರ್ಥಿಯ ಫಲಿತಾಂಶದಲ್ಲಿ ವ್ಯತ್ಯಯವಾದಲ್ಲಿ ನೇರವಾಗಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಕೊಠಡಿ ಮೇಲ್ವಿಚಾರಕರೇ ಜವಾಬ್ದಾರರಾಗಿರುತ್ತಾರೆ. ಆದ್ದರಿಂದ ಈ ಮೂರು ಅಂಶಗಳನ್ನು ಕಡ್ಡಾಯವಾಗಿ ಪರಿಶೀಲಿಸುವುದು.
ವಿದ್ಯಾರ್ಥಿಯು ಗೈರು ಹಾಜರಾದ ಒ.ಎಂ.ಆರ್‌ನ ಮೇಲೆ ಕೆಂಪು ಶಾಯಿಯಲ್ಲಿ ಅಡ್ಡಗೆರೆ ಎಳೆಯುವುದಾಗಲಿ ಅಥವಾ ಅಡ್ಡಗೆರೆ ಎಳೆದು Absent ಎಂದು ನಮೂದಿಸುವುದಾಗಲಿ ಮಾಡದೆ ಒ.ಎಂ.ಆರ್‌ನಲ್ಲಿ Absent ಎಂದು ನಮೂದಿಸಲು ಸ್ಥಳಾವಕಾಶ ನೀಡಿರುವಲ್ಲಿ ಮಾತ್ರ ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನಿನಿಂದ ಶೇಡ್ ಮಾಡುವುದು ಮತ್ತು ನಾಮಿನಲ್ ರೋಲ್‌ನಲ್ಲಿ ವಿದ್ಯಾರ್ಥಿಯ ಹೆಸರಿನ ಮುಂದೆ AB (Absent) ಬಾಕ್ಸ್‌ನಲ್ಲಿ ಶೇಡ್ ಮಾಡುವುದು ಕಡ್ಡಾಯವಾಗಿರುತ್ತದೆ (ಯಾವುದೇ ಕಾರಣಕ್ಕೂ ಕೆಂಪು ಶಾಯಿಯಿಂದ AB ಶೇಡ್ ಮಾಡುವಂತಿಲ್ಲ).
ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಜವಾಬ್ದಾರಿಗಳು
ಜಿಲ್ಲಾ ಉಪನಿರ್ದೇಶಕರು (ಅಭಿವೃದ್ಧಿ):-
ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಉಪನಿರ್ದೇಶಕರು (ಅಭಿವೃದ್ಧಿ) ರವರಿಗೆ ವಹಿಸಲಾಗಿದೆ.
ಪರೀಕ್ಷಾ ಗೌಪ್ಯತೆಯನ್ನು ಕಾಪಾಡುವಲ್ಲಿ ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳುವುದು.
ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಕ್ಷೇತ್ರಶಿಕ್ಷಣಾಧಿಕಾರಿಗಳನ್ನೊಳಗೊಂಡಂತೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಭೆಗಳನ್ನು ಆಯೋಜಿಸಿ ಮಾಹಿತಿ ನೀಡುವುದು.
ಗಣಕಯಂತ್ರ ಬಳಕೆಯಲ್ಲಿ ಪ್ರಾವಿಣ್ಯತೆ ಇರುವ ಡಯಟ್‌ನ ಅಧಿಕಾರಿಗಳನ್ನು ಜಿಲ್ಲೆಗೆ ಒಬ್ಬರಂತೆ ಪರೀಕ್ಷಾ ಕಾರ್ಯಕ್ಕಾಗಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸುವುದು.
ಪರೀಕ್ಷೆಯು ತಾಲ್ಲೂಕುಗಳಲ್ಲಿ ನಡೆಯುವುದರಿಂದ ಡಯಟ್‌ನ ಅಧಿಕಾರಿಗಳನ್ನು ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
ಪರೀಕ್ಷೆಗೆ ಎರಡು/ಮೂರು ದಿನಗಳ ಮುಂಚಿತವಾಗಿ ಕೇಂದ್ರ ಕಛೇರಿಯಿಂದ ಬರುವಂತಹ ಪ್ರಶ್ನೆಪತ್ರಿಕೆಗಳು, ನಾಮಿನಲ್ ರೋಲ್ ಮತ್ತು ಒ.ಎಂ.ಆರ್ ಬಂಡಲ್‌ಗಳನ್ನು ಉಪನಿರ್ದೇಶಕರು (ಅಭಿವೃದ್ಧಿ) ರವರೇ ಸ್ವೀಕರಿಸಿ, ಅದೇ ದಿನದಂದು ತಮ್ಮ ವ್ಯಾಪ್ತಿಯ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ವಿತರಿಸುವುದು.
ಕ್ಷೇತ್ರಶಿಕ್ಷಣಾಧಿಕಾರಿಗಳು ಪ್ರಶ್ನೆಪತ್ರಿಕೆಗಳನ್ನು ಮಾತ್ರ ತಾಲ್ಲೂಕು ಖಜಾನೆಗಳಲ್ಲಿ ಖಜಾನಾಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಠೇವಣಿಸಲು ತಿಳಿಸುವುದು.
ಖಜಾನೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಇಡುವ ಸಂಬಂಧ ಪತ್ರ ಮುಖೇನ ತಾಲ್ಲೂಕು ಖಜಾನಾಧಿಕಾರಿಗಳಿಗೆ ವಿಷಯವನ್ನು ತಿಳಿಸುವ ಬಗ್ಗೆ ಕ್ರಮ ಕೈಗೊಳ್ಳುವುದು.
ಕ್ಷೇತ್ರಶಿಕ್ಷಣಾಧಿಕಾರಿಗಳು ಒ.ಎಂ.ಆರ್ ಬಂಡಲ್ ಗಳು, ನಾಮಿನಲ್ ರೋಲ್ ಹಾಗೂ ಇನ್ನಿತರೆ ಪರೀಕ್ಷಾ ಸಾಮಗ್ರಿಗಳನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ನೀಡುವಂತೆ ತಿಳಿಸುವುದು.
ಪರೀಕ್ಷೆ ನಡೆಯುವ ದಿನದಂದು ಬೆಳಿಗ್ಗೆ 9.00 ಕ್ಕೆ ಸಂಬಂಧಿಸಿದ ಖಜಾನೆಯಿಂದ ಪ್ರಶ್ನೆಪತ್ರಿಕೆಯ ಬಂಡಲ್‌ಗಳನ್ನು ಪಡೆದು ಪರೀಕ್ಷಾ ಕೇಂದ್ರಗಳಿಗೆ ವಿತರಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸೂಚಿಸುವುದು.