ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಮೊದಲು ಕೊಲೆ ಆರೋಪಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಅಲ್ಲಿ ಅವರಿಗೆ ರಾಜಾತಿಥ್ಯ ನೀಡಿದ ವಿಚಾರವಾಗಿ ನಂತರ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಇದೀಗ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಹಣದ ಆಸೆಗೆ ಜೈಲಾಧಿಕಾರಿಗಳೇ ಈ ಒಂದು ರಾಜಾತಿಥ್ಯ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ನಟ ದರ್ಶನ್ ಹಾಗೂ ರೌಡಿಶೀಟರ್ ನಾಗ ಸೇರಿದಂತೆ ಹಲವು ರೌಡಿಶೀಟರ್ ಗಳು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುರ್ಚಿಯ ಮೇಲೆ ಕುಳಿತುಕೊಂಡು ಕಾಫಿ ಕುಡಿಯುತ್ತಾ, ಒಂದು ಕೈಯಲ್ಲಿ ಸಿಗರೇಟ್ ಸೇದುತ್ತಾ ಕುಳಿತಿದ್ದ ಫೋಟೋ ಭಾರಿ ವೈರಲ್ ಆಗಿತ್ತು. ಈ ಕುರಿತು ಜೈಲಲ್ಲೇ 3 ಪ್ರಕರಣ ದಾಖಲಾಗಿದ್ದವು.ಈ ಒಂದು ಘಟನೆಯ ಬಳಿಕ ನಟ ದರ್ಶನ್ ಸೇರಿದಂತೆ ಎಲ್ಲಾ ರೌಡಿಶೀಟರ್ ಗಳನ್ನು ಬೇರೆ ಬೇರೆ ಜಿಲ್ಲಾ ಕೇಂದ್ರ ಕಾರಾಗೃಹಗಳಿಗೆ ಶಿಫ್ಟ್ ಮಾಡಲಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಕೆಲ ಅಧಿಕಾರಿ ಹಾಗೂ ಸಿಬ್ಬಂದಿ ಹಣದ ಆಮಿಷಕ್ಕೆ ಒಳಗಾಗಿ ರಾಜಾತಿಥ್ಯ ನೀಡಿದ್ದಾರೆಂಬುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇದೀಗ ಆಗ್ನೇಯ ವಿಭಾಗದ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡು ಹಲವು ಮಾಹಿತಿಗಳನ್ನು ಕಲೆಹಾಕಿ, ಹೇಳಿಕೆಗಳನ್ನು ಪಡೆದುಕೊಂಡು ವರದಿ ಸಿದ್ಧಪಡಿಸಿದ್ದಾರೆ. ಶೀಘ್ರದಲ್ಲೇ ಆಗ್ನೇಯ ಭಾಗದ ಡಿಸಿಪಿ ಸಾ.ರಾ. ಪಾತೀಮಾ ಅವರು ನಗರ ಪೊಲೀಸ್ ಆಯುಕ್ತ ದಯಾನಂದ ಅವರಿಗೆ ಈ ವರದಿಯನ್ನು ನೀಡಲಿದ್ದಾರೆ.