ಬೆಂಗಳೂರು : ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ ನಾನಾ ರೀತಿಯ ಯೋಜನೆಗಳು ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತದೆ. ಆದರೆ ಇಂದಿನ ಆಧುನಿಕ ಯುಗದಲ್ಲೂ ಕೂಡ ಹಳ್ಳಿ ಭಾಗಗಳಲ್ಲಿ ಬಾಲ್ಯ ವಿವಾಹ ತಡೆಗಟ್ಟುವುದು ಕಷ್ಟಕರವಾಗಿದೆ. ಇದೀಗ ರಾಜ್ಯದಲ್ಲಿ ಕಳೆದ 2024 ಮತ್ತು 25ನೇ ಸಾಲಿನಲ್ಲಿ ಒಟ್ಟು 700 ಬಾಲ್ಯ ವಿವಾಹಗಳು ನಡೆದಿವೆ.
ಹೌದು 2024-25ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 700 ಬಾಲ್ಯ ವಿವಾಹಗಳು ನಡೆದಿವೆ. ಒಟ್ಟು 3,049 ಬಾಲ್ಯ ವಿವಾಹ ದೂರುಗಳು ಸ್ವೀಕೃತವಾಗಿವೆ. ಈ ಪೈಕಿ 2,349 ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಿನ ವಿಚಾರವಾಗಿದೆ. ಎರಡು ದಿನ ಸಿಎಂ ನೇತೃತ್ವದಲ್ಲಿ ನಡೆದ ಡಿಸಿ ಹಾಗೂ ಸಿಇಒಗಳ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2024-25ರಲ್ಲಿ 700 ಬಾಲ್ಯ ವಿವಾಹಗಳು ನಡೆದಿವೆ.
ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿಯರ ಪ್ರಮಾಣ ಅಧಿಕ ಪ್ರಮಾಣದಲ್ಲಿರುವುದು ಆತಂಕಕಾರಿ ವಿಚಾರವಾಗಿದೆ. ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳನ್ನು ಕಡಿಮೆಗೊಳಿಸಲು ಸಿಎಂ ಸಿದ್ದರಾಮಯ್ಯ ಕೂಡ ಎರಡು ದಿನಗಳ ಕಾಲ ನಡೆದ ಡಿಸಿಗಳು ಹಾಗೂ ಸಿಇಒಗಳ ಸಭೆಯಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಗಳು ಈ ಸಂಬಂಧ ಕಠಿಣ ಕಾನೂನು ಪಾಲನೆ ಮಾಡುತ್ತಿದ್ದರೂ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಜನಜಾಗೃತಿ ಜೊತೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದರೂ ಈ ಸಾಮಾಜಿಕ ಪಿಡುಗು ದೂರವಾಗಿಲ್ಲ.
ಇದರಲ್ಲಿ, ಶಿವಮೊಗ್ಗದಲ್ಲಿ ಅತೀ ಹೆಚ್ಚು 79 ಬಾಲ್ಯ ವಿವಾಹಗಳು ನಡೆದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ 78 ಬಾಲ್ಯ ವಿವಾಹ ನಡೆದಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗದಲ್ಲಿ 74 ಬಾಲ್ಯ ವಿವಾಹ ನಡೆದರೆ, ಬಾಗಲಕೋಟೆ ಜಿಲ್ಲೆಯಲ್ಲಿ 60, ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ 60, ಮಂಡ್ಯದಲ್ಲಿ 57 ಹಾಗೂ ಹಾವೇರಿ ಜಿಲ್ಲೆಯಲ್ಲಿ 42 ಬಾಲ್ಯ ವಿವಾಹಗಳು ನಡೆದಿವೆ.
ಅದೇ ರೀತಿ ರಾಜಧಾನಿ ಬೆಂಗಳೂರು ನಗರದಲ್ಲಿ ಬಾಲ್ಯ ವಿವಾಹಗಳ ಬಗ್ಗೆ 83 ದೂರುಗಳು ಸ್ವೀಕೃತವಾಗಿದ್ದು, ಈ ಪೈಕಿ 53 ವಿವಾಹಗಳನ್ನು ತಡೆಯಲಾಗಿದೆ. ಆದರೆ, 30 ಬಾಲ್ಯ ವಿವಾಹಗಳು ನಡೆದಿವೆ. ಇನ್ನುಳಿದಂತೆ, ರಾಮನಗರ ಜಿಲ್ಲೆಯಲ್ಲಿ 28, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 24, ಯಾದಗಿರಿಯಲ್ಲಿ 16, ಹಾಸನದಲ್ಲಿ 15 ಹಾಗೂ ಕೋಲಾರದಲ್ಲಿ 14 ಬಾಲ್ಯ ವಿವಾಹಗಳು ನಡೆದಿವೆ.
ಸಿಎಂ ತವರಲ್ಲೇ ಅತೀ ಹೆಚ್ಚು ದೂರು!
ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ, ಬಾಲ್ಯ ವಿವಾಹ ಸಂಬಂಧ ಅತಿ ಹೆಚ್ಚು ದೂರು ಸ್ವೀಕೃತವಾಗಿರುವುದು ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯಲ್ಲಾಗಿದೆ. ಜಿಲ್ಲೆಯಲ್ಲಿ ಸುಮಾರು 284 ದೂರುಗಳು ಸ್ವೀಕೃತವಾಗಿದ್ದು, ಆ ಪೈಕಿ 224 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಉಳಿದಂತೆ ಮಂಡ್ಯದಲ್ಲಿ 180 ದೂರುಗಳು ಸ್ವೀಕೃತವಾಗಿದ್ದು, ಆ ಪೈಕಿ 129 ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಅಧಿಕಾರಿಗಳು ಸಫಲರಾಗಿದ್ದಾರೆ.