ಮೈಸೂರು : ಹುಲಿ ಸೆರೆಗಾಗಿ ಕಾಡಿನಲ್ಲಿ ಕೂಂಬಿಂಗ್ ನಡೆಸುತ್ತಿದ್ದ ಸಂದರ್ಭದಲ್ಲೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಮೈಸೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದಿದೆ.
ಕೂಂಬಿಂಗ್ ಕಾರ್ಯಾಚರಣೆ ನಡೆಸುವಾಗ ಹುಲಿಯು ಗ್ರಾಮದ ಬೋಳೆಗೌಡನಕಟ್ಟೆ ಕೆರೆ ಬಳಿ ಅವಿತು ಕುಳಿತಿತ್ತು. ಇದನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಬಳಿ ಯಾರು ಹೋಗದಂತೆ ಎಚ್ಚರಿಕೆ ನೀಡಿದ್ದರು. ಆದರೆ, ಹುಲಿ ಗಾಬರಿಗೊಂಡು ಕುಮಾರ್ ಎಂಬುವರ ತೋಟದ ಕಡೆಗೆ ಓಡಿದ್ದು, ನಂತರ ಮತ್ತೆ ಅಲ್ಲಿಂದ ನುಗು ಅರಣ್ಯದ ಕಡೆಗೆ ಓಡಿ ಹೋಗಿ ಪೊದೆಯಲ್ಲಿ ಅವಿತು ಕುಳಿತಿತ್ತು.
ಹುಲಿ ಸೆರೆಗೆ ಅಭಿಮನ್ಯು, ಭಗೀರಥ ಎಂಬ ಸಾಕಾನೆಗಳನ್ನು ಕರೆಯಿಸಿಕೊಂಡ ಅರಣ್ಯ ಇಲಾಖೆಯು ಸಾಕಾನೆಯನ್ನು ಪೊದೆಗೆ ಬಿಟ್ಟರು. ಇದರಿಂದ ಹೆದರಿದ ಹುಲಿ ಪೊದೆಯಿಂದ ಹೊರ ಬಂದು ಮತ್ತೆ ಕಾಡಿನತ್ತ ಓಡಿತು. ಆಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವ್ ಎಂಬುವರ ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಮಹದೇವ್ ಅವರಿಗೆ ತುಂಬಾ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಕುಸಿದು ಬಿದ್ದರು. ಮುಖ, ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.