ಪ್ರಯಾಗ್‌ರಾಜ್ : ಮದುವೆಯ ಸುಳ್ಳು ಭರವಸೆ ನೀಡಿ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿವಾಹಿತ ವ್ಯಕ್ತಿ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸುವುದು ವಂಚನೆ ಎಂದು ಹೇಳಿದೆ.
ನ್ಯಾಯಮೂರ್ತಿ ಅವನೀಶ್ ಸಕ್ಸೇನಾ ಅವರ ಏಕಸದಸ್ಯ ಪೀಠವು ಸಹರಾನ್‌ಪುರದ ವಿಪಿನ್ ಕುಮಾರ್ ಎಂಬುವವರ ವಿರುದ್ಧದ ಕ್ರಿಮಿನಲ್ ಕ್ರಮಗಳನ್ನು ರದ್ದುಗೊಳಿಸಲು ನಿರಾಕರಿಸಿತು.
ಹಿನ್ನೆಲೆ: ಸಂತ್ರಸ್ತ ಮಹಿಳೆಯ ಪ್ರಕಾರ, 2018 ರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾದ ಆರೋಪಿ, ಮದುವೆಯ ಭರವಸೆ ನೀಡಿ ನಿರಂತರವಾಗಿ ದೈಹಿಕ ಸಂಬಂಧ ಬೆಳೆಸಿದ್ದ. ಈ ಅವಧಿಯಲ್ಲಿ ಸಂತ್ರಸ್ತೆ ಐದು ಬಾರಿ ಗರ್ಭಿಣಿಯಾಗಿದ್ದು, ನಾಲ್ಕು ಬಾರಿ ಗರ್ಭಪಾತ ಮಾಡಿಸಲಾಗಿತ್ತು. ಅಲ್ಲದೆ, ಆಕ್ಷೇಪಾರ್ಹ ಚಿತ್ರಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪವೂ ಇತ್ತು.
ಆರೋಪಿಯು ಮೊದಲೇ ವಿವಾಹಿತನಾಗಿದ್ದ ಎಂಬ ಅಂಶ ಮೇಲ್ನೋಟಕ್ಕೆ ಕಂಡುಬಂದರೆ, ಆತ ನೀಡಿದ ಮದುವೆಯ ಭರವಸೆಯು ಆರಂಭದಿಂದಲೇ ಕಪಟ ಅಥವಾ ವಂಚನೆಯಿಂದ ಕೂಡಿದೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕ್ರಿಮಿನಲ್ ಕ್ರಮಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.








