ರಾಯಚೂರು : ಜುಲೈ 11 ರಂದು ರಾಯಚೂರಿನಲ್ಲಿ ಪತ್ನಿಯಿಂದ ನದಿಗೆ ತಳ್ಳಲ್ಪಟ್ಟ ಗಂಡ ತಾತಪ್ಪ, ಸ್ಥಳೀಯರ ಸಹಕಾರದಿಂದ ಪ್ರಾಣ ಉಳಿಸಿಕೊಂಡು ಬದುಕಿ ಬಂದಿದ್ದಾನೆ. ಇದೀಗ ಆತನನ್ನು 2025ರಲ್ಲಿ ಹೆಂಡತಿಯ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ ಎಂದು ಕರೆಯಲಾಗುತ್ತಿದೆ. ಹೆಂಡತಿಯ ಸಂಬಂಧದ ಕುರಿತು ದಿಟ್ಟ ನಿರ್ಧಾರ ಕೈಗೊಂಡಿದ್ದಾನೆ.
ಹೌದು ಜುಲೈ 11ರಂದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಬಳಿ ಪತ್ನಿ ಗದ್ದೆಮ್ಮ ತನ್ನ ಪತಿ ತಾತಪ್ಪನನ್ನು ಕೃಷ್ಣ ನದಿಗೆ ತಳ್ಳಿದ ಘಟನೆಯು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪತಿ ನಾನು ಹೆಂಡತಿ ಜೊತೆಗೆ ಬಾಳಲ್ಲ. ಅವಳನ್ನ ತವರು ಮನೆಗೆ ಬಿಟ್ಟು ಬರ್ತೀನಿ ಡೈವೋರ್ಸ್ ಮೂಲಕ ನನಗೆ ಮುಕ್ತಿ ಬೇಕು ಎಂದು ಹೇಳಿದ್ದಾನೆ.
ಇದೀಗ ಸಂಧಾನ ಸಭೆಯ ಅಂತಿಮ ಮಾತುಕತೆಗಳು ತಾತಪ್ಪ ಹಾಗೂ ಪತ್ನಿ ಗದ್ದೆಮ್ಮ ಕುಟುಂಬಸ್ಥರು, ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಡೆಸಲಾಯಿತು. ಈ ರಾಜಿ ಪಂಚಾಯಿತಿಯಲ್ಲಿ ಪತಿ ತಾತಪ್ಪ ತನ್ನ ಪತ್ನಿಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಘಟನೆ ಬಗ್ಗೆ ತಾತಪ್ಪನಿಂದ ಗ್ರಾಮೀಣ ಠಾಣೆ ಪೊಲೀಸರಿಗೂ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ತಾತಪ್ಪ ತಮ್ಮ ಪತ್ನಿಯೊಂದಿಗೆ ಮುಂದಿನ ಜೀವನ ನಡೆಸಲು ತಾತಪ್ಪ ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದಾನೆ. ಪತ್ನಿಯನ್ನು ಇನ್ನು ಮುಂದೆ ತವರು ಮನೆಯಲ್ಲಿಯೇ ಇಡಬೇಕು. ನನ್ನ ಜೊತೆಗೆ ಕಳಿಸಬಾರದು. ಮದುವೆ ಸಂಬಂಧ ಇನ್ನು ಮುಂದೆ ಮುಕ್ತವಾಗಬೇಕು. ನನಗೆ ಡಿವೋರ್ಸ್ ಮೂಲಕ ಹೆಂಡತಿಯಿಂದ ಮುಕ್ತಿ ಕೊಡಿಸಬೇಕು. ನನ್ನ ಜೊತೆಗೆ ಪತ್ನಿ ಕರೆದೊಯ್ಯುವಂತೆ ಹೇಳಿದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಗಂಡ ತಾತಪ್ಪ ತನ್ನ ನಿರ್ಧಾರ ತಿಳಿಸಿದ್ದಾನೆ.