ಬೆಂಗಳೂರು : ವಿಜಾಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಕ್ರಮ ಕೈಗೊಂಡಿದೆ. ಇದರ ಬೆನ್ನಲ್ಲೆ ಬಿಜೆಪಿ ಶಾಸಕರಾದಂತಹ ಶಿವರಾಂ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಅವರಿಗೂ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಇದೀಗ ಶಾಸಕ ಶಿವರಾಮ್ ಹೆಬ್ಬಾರ್‌ಗೂ ನಮ್ಮ ಪಕ್ಷಕ್ಕೂ ಮುಗಿದ ಅಧ್ಯಾಯ. ಅವರು ಈಗ ನಮ್ಮ ಪಕ್ಷದವರಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಶಾಕಿಂಗ್ ಗ್ ಹೇಳಿಕೆ ನೀಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೆ, ಹೆಬ್ಬಾರ್ ಅವರು ಕುಳಿತೇ ಇರುತ್ತಾರೆ. ಅವರನ್ನು ನಾವು ಕೈ ಬಿಟ್ಟಿದ್ದೇವೆ. ಶಿವರಾಮ್ ಹೆಬ್ಬಾರ್‌ಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದರು.
ಇನ್ನು ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊಲೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರಿಗೇ ಆಗಲಿ ಕೊಲೆ ಬೆದರಿಕೆ ಹಾಕಬಾರದು. ಹಿಂದುತ್ವದ ಪರ ಮಾತನಾಡುವ, ಹೋರಾಡುವ ಯಾರಿಗೇ ಆಗಲಿ ನಮ್ಮ ಬೆಂಬಲ ಇರಲಿದೆ. ಯತ್ನಾಳ್ ಅವರಿಗೆ ಕೊಲೆ ಬೆದರಿಕೆ ಹಾಕಿರುವುದನ್ನು ಖಂಡಿಸುತ್ತೇವೆ ಎಂದರು.