ಬೆಂಗಳೂರು : ರಾಜ್ಯ ಸರ್ಕಾರ ಈಗಾಗಲೇ ಬಸ್ಸು, ಮೆಟ್ರೋ ಟ್ರೈನ್ ಸೇರಿದಂತೆ ಹಲವು ವಸ್ತುಗಳ ದರ ಏರಿಕೆ ಮಾಡಿ ಜನತೆಗೆ ಶಾಕ್ ನೀಡಿದೆ. ಇದರ ಬೆನ್ನಲ್ಲೆ ಇದೀಗ ಪ್ರಾಣಿ ಪ್ರೀಯರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರವೇಶ ಶುಲ್ಕ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ.
ಹೌದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರವೇಶ ಶುಲ್ಕ ಏರಿಕೆಗೆ ಸರ್ಕಾರ ಅಸ್ತು ಎಂದಿದೆ. ಶೇ 20 ರಷ್ಟು ಪ್ರವೇಶ ಶುಲ್ಕ ಹೆಚ್ಚಳಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಅಂತಿಮ ಆದೇಶ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದೆ. ಆಗಸ್ಟ್ 1 ರಿಂದ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆ ಇದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಜೂ ವೀಕ್ಷಣೆಗೆ ವಯಸ್ಕರಿಗೆ ಹಾಲಿ ಟಿಕೆಟ್ ದರ 100 ರೂ. ಇದ್ದು 120 ಆಗಲಿದೆ.
ಮಕ್ಕಳಿಗೆ ಹಾಲಿ ಟಿಕೆಟ್ ದರ 50 ರೂ. ಇದ್ದು 60 ರೂ. ಆಗಲಿದೆ. ಹಿರಿಯ ನಾಗರಿಕರಿಗೆ ಹಾಲಿ ಟಿಕೆಟ್ ದರ 60 ರೂ. ಇದ್ದು 70 ರೂ. ಆಗಲಿದೆ. ಅಲ್ಲದೆ ಸಫಾರಿ ಕೊಂಬೋ ಪ್ಯಾಕ್ ದರ ಕೂಡ ಹೆಚ್ಚಳವಾಗಲಿದೆ. ವಾರದ ದಿನಗಳಲ್ಲಿ 350 ರೂ. ಇದ್ದಿದ್ದು, 370 ರೂ. ಆಗಲಿದೆ. ವಾರದ ಕೊನೆ ದಿನಗಳಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ 400 ರೂ. ಇದ್ದಿದ್ದು, 420 ರೂ. ಆಗಲಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನ ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರವಾಸಿಗರ ಟಿಕೆಟ್ ಹಣವೇ ಆದಾಯದ ಮೂಲವಾಗಿದೆ. ಹೀಗಾಗಿ, ಶೇ 50 ರಷ್ಟು ಪ್ರವೇಶ ಶುಲ್ಕ ಹೆಚ್ಚಳಿಸುವಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಾಧಿಕಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರ್ಕಾರ ಶೇ 20 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೆ. ಪರಿಷ್ಕೃತ ದರ ಆಗಸ್ಟ್ 1 ರಿಂದ ಹೊಸ ದರ ಜಾರಿಗೆ ಬರಲಿದೆ.