ಬೆಂಗಳೂರು : ದೀಪಾವಳಿ ಹಬ್ಬದ ಅಂಗವಾಗಿ ಪಟಾಕಿ ಸಿಡಿಸುವ ವೇಳೆ ಎಷ್ಟೇ ಜಾಗರೂಕರಾಗಿ ಇರಿ ಎಂದು ಹೇಳಿದರೂ ಕೂಡ ಕೆಲವೊಂದು ಬಾರಿ ಅವಘಡಗಳು ಸಂಭವಿಸುತ್ತಲೆ ಇರುತ್ತವೆ. ಇದೀಗ ಬೆಂಗಳೂರಿನಲ್ಲಿ ಇಂದು ಪಟಾಕಿ ಸಿಡಿಸಿದ ಪರಿಣಾಮ 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಪಟಾಕಿ ಸಿಡಿದು ಇದುವರೆಗೂ 54 ಜನರಿಗೆ ಗಂಭೀರವಾದ ಗಾಯಗಳಾಗಿವೆ. ಮಿಂಟೋ ಆಸ್ಪತ್ರೆಯಲ್ಲಿ 10, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 12, ಅಗರ್ವಾಲ್ ಆಸ್ಪತ್ರೆಯಲ್ಲಿ 9, ನಾರಾಯಣ ನೇತ್ರಾಲಯದಲ್ಲಿ 23 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಇವುಗಳಲ್ಲಿ ಬೇರೆಯವರು ಸಿಡಿಸಿದ ಪಟಾಕಿಯಿಂದ ಕಣ್ಣಿನ ತೊಂದರೆಗೆ ಒಳಗಾದವರೇ ಹೆಚ್ಚು ಎನ್ನಲಾಗಿದೆ.
ಶುಕ್ರವಾರ ಓರ್ವ ವಯಸ್ಕ ಸೇರಿದಂತೆ 10 ಮಕ್ಕಳು ಪಟಾಕಿ ಅವಘಡಗಳಿಗೆ ತುತ್ತಾಗಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 6 ಮಂದಿ ಹೊರರೋಗಿ ವಿಭಾಗದಲ್ಲಿ ಹಾಗೂ ನಾಲ್ವರು ಇತರೆ ವಿಭಾಗದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. 4 ಮಕ್ಕಳಿಗೆ ತೀವ್ರ ಹಾಗೂ 2 ಮಕ್ಕಳಿಗೆ ಸಾಮಾನ್ಯ, ಒಂದು ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಶುಕ್ರವಾರ ಪಟಾಕಿ ಅವಗಢ ಸಂಬಂ ಧಿಸಿದಂತೆ 12 ಪ್ರಕರಣ ವರದಿಯಾಗಿದೆ.