ಶಿವಮೊಗ್ಗ : ರಾಜ್ಯದಲ್ಲಿ ಒಂದೇ ದಿನ ಗೌರವದ ದುರಂತ ಸಂಭವಿಸಿದ್ದು ಪ್ರತ್ಯೇಕ ಘಟನೆಗಳಲ್ಲಿ ಎರಡು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು ಆರು ಮಂದಿ ನೀರು ಪಾಲಾಗಿದ್ದಾರೆ. ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡದಲ್ಲಿ ಒಂದೇ ದಿನ ಆರು ಜನರು ಜಲಸಮಾಧಿಯಾಗಿದ್ದಾರೆ.
ಮೊದಲ ಘಟನೆ ನಡೆದಿದ್ದು, ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋದ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಶಿವಮೊಗ್ಗದ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ನಲ್ಲಿ ಭಾನುವಾರ ನಡೆದಿದೆ. ಅರಬಿಳಚಿ ಕ್ಯಾಂಪ್ನ ನಿವಾಸಿ ನೀಲಬಾಯಿ (50), ಮಗ ರವಿ ಕುಮಾರ್ (21), ಮಗಳು ಶ್ವೇತಾ (28) ಹಾಗೂ ಅಳಿಯ ಪರಶುರಾಮ (33) ನೀರು ಪಾಲಾದವರು ಎಂದು ತಿಳಿದುಬಂದಿದೆ.
ಹೊಳೆಹೊನ್ನೂರು ಪೊಲೀಸರು ಶಿವಮೊಗ್ಗದಿಂದ ಅಗ್ನಿಶಾಮಕದಳದವರನ್ನು ಕರೆಯಿಸಿ ಹುಡುಕಾಟ ನಡೆಸಿದ್ದಾರೆ. ನಿನ್ನೆ ಕತ್ತಲಾದ ಕಾರಣ ಇಂದು ಹುಡುಕಾಟ ಮುಂದುವರೆಯಲಿದೆ. ರಾಜರಾವ್ ಅವರು ನೀಡಿದ ದೂರಿನಂತೆ ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಕಾರ್ಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸ್ನೇಹಿತನನ್ನು ರಕ್ಷಿಸಲು ಹೋದ ಯುವಕ ಸೇರಿ ಇಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಘಟನೆ ಸುಬ್ರಹ್ಮಣ್ಯದ ಕುಲ್ಕುಂದ ಪ್ರದೇಶದಲ್ಲಿ ಶನಿವಾರ ಸಂಜೆ ಸಂಭವಿಸಿತು. ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ನಿವಾಸಿ ಜಯರಾಮ ಅವರು ನೀಡಿದ ದೂರಿನನ್ವಯ ಅವರ ಸಹೋದರನ ಮಗ ಸುಜಿತ್ (28) ಹಾಗೂ ಗೋಪಾಲ್ ನಾಯರ್ ಎಂಬವರ ಪುತ್ರ ಹರಿಪ್ರಸಾದ್ (39) ಎಂಬವರು ಮುಳುಗಿ ಸಾವನ್ನಪ್ಪಿದ್ದಾರೆ.
ಸುಜಿತ್ ಮತ್ತು ಹರಿಪ್ರಸಾದ್ ತಮ್ಮ ಇತರ ಸ್ನೇಹಿತರೊಂದಿಗೆ ಕುಲ್ಕುಂದದ ನದಿದಡದಲ್ಲಿ ಸಮಯ ಕಳೆಯುತ್ತಿದ್ದರು. ಸುಜಿತ್ ಈಜಾಡಲು ನದಿಗಿಳಿದಿದ್ದಾನೆ. ಆದರೆ, ಆತನಿಗೆ ಸರಿಯಾಗಿ ಈಜು ಬಾರದೆ ಆಳವಾದ ನೀರಿನಲ್ಲಿ ಮುಳುಗತೊಡಗಿದ್ದಾನೆ. ಸ್ನೇಹಿತ ಅಪಾಯದಲ್ಲಿರುವುದನ್ನು ಕಂಡ ಹರಿಪ್ರಸಾದ್ ತಕ್ಷಣವೇ ಸುಜಿತ್‌ನನ್ನು ರಕ್ಷಿಸಲು ನೀರಿಗಿಳಿದಿದ್ದಾನೆ. ಆದರೆ ನೀರಿನ ಪ್ರವಾಹ ಹಾಗೂ ಆಳವಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.








