ಬೆಂಗಳೂರು :ರಾಜ್ಯದಲ್ಲಿ ಒಂದನೇ ತರಗತಿ ಪ್ರವೇಶಾತಿಗೆ ಮಕ್ಕಳ ಕನಿಷ್ಠ ವಯೋಮಿತಿಯನ್ನು ಆರು ವರ್ಷ ಹಾಗೂ ಎಲ್ ಕೆಜಿ ಪ್ರವೇಶಕ್ಕೆ 4 ವರ್ಷ ನಿಗದಿ ಮಾಡಲಾಗಿದೆ.
ಎಲ್ ಕೆಜಿ ದಾಖಲಾತಿಗೆ ಆಯಾ ಶೈಕ್ಷಣಿಕ ವರ್ಷದ ಜೂನ್ 1 ಕ್ಕೆ ಕಡ್ಡಾಯವಾಗಿ 4 ವರ್ಷ ಪೂರ್ಣಗೊಂಡಿರಬೇಕೆಂದು 2023-24 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ.
1 ನೇ ತರಗತಿ ಪ್ರವೇಶಕ್ಕೆ 2024-25 ನೇ ಸಾಲಿನಿಂದ ಆಯಾ ಸಾಲಿನ ಜೂನ್ 1 ಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂದು ಆದೇಶಿಸಲಾಗಿದೆ. ಆದರೆ ನಿಗದಿತ ವಯೋಮಿತಿಗೆ ಒಂದು ದಿನ ಕಡಿಮೆ ಆದರೂ ಮಕ್ಕಳೂ ದಾಖಲಾತಿ ವಂಚಿತರಾಗುತ್ತಿದ್ದಾರೆ. ಹೀಗಾಗಿ ಒಂದು ವರ್ಷ ಶಾಲಾ ಪ್ರವೇಶದಿಂದ ಮಕ್ಕಳು ವಂಚಿತರಾಗುವುದನ್ನು ತಡೆಯಲು ನಿಗದಿತ ವಯೋಮಿತಿಯಲ್ಲಿ ಕೆಲ ತಿಂಗಳ ಸಡಿಲ ಅಥವಾ ವಿನಾಯಿತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪೋಷಕರು ಒತ್ತಾಯಿಸಿದ್ದಾರೆ.