ಬೆಂಗಳೂರು : ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜಾರಿ ಮಾಡಿದ್ದೂ, ಅದೇ ರೀತಿಯಾಗಿ ಸರ್ಕಾರ ಆರನೇ ಗ್ಯಾರಂಟಿಯಾಗಿ ಬಡಜನತೆಗೆ ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ. ವಸತಿ ಯೋಜನೆಗಳಡಿ ನಿರ್ಮಿಸಿಕೊಡುತ್ತಿರುವ 2.32 ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ ಫೆ.24ರಂದು 36000 ಮನೆಯನ್ನು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಆಹ್ಮದ್ ಖಾನ್ ಘೋಷಿಸಿದರು.
ಮಂಗಳವಾರ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಆಯೋಜಿಸಿದ್ದ ‘ಮನೆ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ಪ್ರಣಾಳಿಕೆಯಲ್ಲಿ ಹೇಳದಿದ್ದರೂ ಆರನೇ ಗ್ಯಾರಂ ಟಿಯಾಗಿ ವಸತಿ ಯೋಜನೆಗೆ ಫಲಾನುಭವಿಗಳು ಕೊಡಬೇ ಕಾದ ಹಣವನ್ನು ಸರ್ಕಾರದಿಂದಲೇ ಭರಿಸುತ್ತಿದ್ದೇವೆ.
7400 ಕೋಟಿ ಸ್ಲಂ ಬೋರ್ಡ್ ಹಾಗೂ 1800 ಕೋಟಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಲು ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಸಿಕ್ಕಿದೆ.ಮೊದಲಹಂತದಲ್ಲಿ ಮುಖ್ಯಮಂತ್ರಿಗಳು *500 ಕೋಟಿ ಬಿಡುಗಡೆ ಮಾಡಿದ್ದಾರೆ. ಫೆ.24ರಂದು 36000 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಎಲ್ಲ ಮನೆಗಳನ್ನು ಹಂಚಿಕೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
2015ರಿಂದ 2023ರವರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 1,80,253 ಮನೆ, ರಾಜೀವ್ ಗಾಂಧಿ ವಸತಿ ನಿಗಮದಡಿ 53,680 ಮನೆ ಸೇರಿ ಒಟ್ಟಾರೆ 2.33 ಲಕ್ಷ ಮನೆಗಳು ಮಂಜೂರಾಗಿದ್ದವು. ಆದರೆ, ಈವರೆಗೆ ಒಂದು ಮನೆಯನ್ನೂ ಕೊಡಲು ಸಾಧ್ಯವಾಗಿ ರಲಿಲ್ಲ. ಒಂದು ಮನೆ ಕಟ್ಟಲು 7.50 ಲಕ್ಷ ಬೇಕಾಗುತ್ತದೆ. ಅದರಲ್ಲಿ ಕೇಂದ್ರ ಸರ್ಕಾರ ಈ 1.50 ಲಕ್ಷ, ರಾಜ್ಯ ಸರ್ಕಾರ ಜನರಲ್ ಕೆಟಗರಿಗೆ 1.20 ಲಕ್ಷ, ಎಸ್ಸಿ,ಎಸ್ಟಿಗೆ 2 ಲಕ್ಷ ಕೊಡುತ್ತೇವೆ.
ಫಲಾನುಭವಿ 4.50 ಲಕ್ಷ ಹಾಕಬೇಕಾಗುತ್ತದೆ. ಆದರೆ, ಬಡವರು ಇಷ್ಟೊಂದು ಹಣ ಕೊಡಲು ಸಾಧ್ಯವಾಗಲ್ಲ. ಫಲಾನುಭವಿಗಳಿಂದ 1.80 ಲಕ್ಷ ಮನೆಗೆ ಸುಮಾರು ಸ್ಲಂ ಬೋರ್ಡ್ಗೆ ₹7400 ಕೋಟಿ ಬರಬೇಕು. ಆದರೆ, ಕೇವಲ 300 ಕೋಟಿ ಬಂದಿದೆ. ಇದರ ಜೊತೆಗೆ ಶಾಸಕರು ಈ ಬಗ್ಗೆ ಹೆಚ್ಚಿನ ಜಾಗೃತಿಯನ್ನೂ ಮೂಡಿಸಿಲ್ಲ. ಪರಿಣಾಮ ಬಡಜನತೆ ಇಂದಿಗೂ ತಾಡಪಾಲ್, ಶೆಡ್ನಲ್ಲಿ ವಾಸಿಸುತ್ತಿದ್ದು, ವಸತಿ ಯೋಜನೆ ನನೆಗುದಿಗೆ ಬಿದ್ದಿತ್ತು. ನಮ್ಮ ಸರ್ಕಾರ ಬಡವರ ಮೇಲಿನ ಕಾಳಜಿಯಿಂದ ಫಲಾನುಭವಿಗಳ ಆರ್ಥಿಕ ಸಮಸ್ಯೆ ನಿವಾರಿಸಿದೆ ಎಂದರು.